ಅವಳನ್ನ ಮರೆತು ಬದುಕಲು ಆಗ್ತಿಲ್ಲ... ಮಾಜಿ ಪತ್ನಿಯ ನೆನೆದು ಬಿಗ್​ಬಾಸ್​​ ಮನೆಯಲ್ಲಿ ಕಣ್ಣೀರಿಟ್ಟ ಸೋಮಣ್ಣ!

somanna machimada
Published on

ಬೆಂಗಳೂರು: ‘ಬಿಗ್​ ಬಾಸ್​ ಒಟಿಟಿ ಕನ್ನಡ’ದ ಮೊದಲ ಸೀಸನ್​ನಲ್ಲಿ ಒಟ್ಟು 16 ಸ್ಪರ್ಧಿಗಳಿದ್ದು, ಅಸಲಿ ಆಟ ಶುರುವಾಗಿದೆ. ಶೋನ ಮೊದಲ ದಿನವೇ 'ನಾನು ಯಾರು?' ಎಂದು ಎಲ್ಲ ಸ್ಪರ್ಧಿಗಳು ಪರಿಚಯ ಮಾಡಿಕೊಳ್ಳುತ್ತಲೇ ಜೀವನದಲ್ಲಿ ತಾವು ಅನುಭವಿಸಿದ ನೋವು, ಈಗಲೂ ಕಾಡುತ್ತಿರುವ ಕಹಿ ಘಟನೆಗಳನ್ನ ಎಳೆಎಳೆಯಾಗಿ ಬಿಚ್ಚಿಡುತ್ತಾ ಕಣ್ಣೀರು ಸುರಿಸಿದ್ದಾರೆ. ಪತ್ರಕರ್ತ ಸೋಮಣ್ಣ ಮಾಚಿಮಾಡ ಕೂಡ ಮಾಜಿ ಪತ್ನಿಯನ್ನ ನೆನೆದು ಕಣ್ಣೀರಿಟ್ಟಿದ್ದಾರೆ. ಆಕೆಯನ್ನು ಮರೆಯಲು ಆಗುತ್ತಿಲ್ಲ... ಆಕೆಯೇ ಮೊದಲು ಮತ್ತು ಆಕೆಯೇ ಕೊನೆ ಎಂದು ಭಾವುಕರಾಗಿದ್ದಾರೆ.

ಪತ್ರಕರ್ತರಾಗಿ, ನಿರೂಪಕರಾಗಿ ಚಿರಪರಿಚಿತರಾಗಿರುವ ಸೋಮಣ್ಣ ಮಾಚಿಮಾಡ ಅವರ ವೈಯಕ್ತಿಕ ಬದುಕಲ್ಲಿ ಕಹಿ ಘಟನೆ ನಡೆದಿದೆ. ಪತಿ-ಪತ್ನಿ ಇಬ್ಬರೂ ದೂರವಾಗಿರುವ ವಿಚಾರವನ್ನು ದೊಡ್ಮನೆಯ ವೇದಿಕೆಯಲ್ಲಿ ಸ್ವತಃ ಸೋಮಣ್ಣ ಅವರೇ ಹೇಳಿಕೊಂಡಿದ್ದಾರೆ. ಬಿಗ್​ ಬಾಸ್​ ಮನೆಗೆ ಎಂಟ್ರಿ ಆಗುತ್ತಿರುವಾಗಲೇ 'ನಾನು ಒಂಟಿ' ಎಂದು ಸೋಮಣ್ಣ ಹೇಳಿದ್ದರು. ಅರೇ, ಇದ್ಹೇಕೆ ಸೋಮಣ್ಣ ಒಂಟಿ ಅನ್ನುತ್ತಿದ್ದಾರೆ. ಅವರ ಜತೆ ಯಾರೂ ಇಲ್ವಾ? ಏನಾಗಿದೆ ಅವರ ಬದುಕಲ್ಲಿ ಎಂಬಿತ್ಯಾದಿ ಪ್ರಶ್ನೆಗಳು ಜನರ ಮನದಲ್ಲಿ ಮೂಡಿತ್ತು. ಈಗ ಸೋಮಣ್ಣ ಅವರೇ ತಮ್ಮ ಬದುಕಿನಲ್ಲಿ ಸಂಭವಿಸಿದ ಕಹಿ ಘಟನೆ ಬಗ್ಗೆ ಬಿಚ್ಚಿಟ್ಟಿದ್ದಾರೆ.

ಇವತ್ತಿಗೂ ಅವಳನ್ನು ಮರೆತು ಬದುಕಲು ನನಗೆ ಸಾಧ್ಯವಾಗುತ್ತಿಲ್ಲ. ಆಕೆಯೇ ಫಸ್ಟ್​, ಆಕೆಯೇ ಲಾಸ್ಟ್​... ಜೀವನದಲ್ಲಿ ನಾನು ಅವಳನ್ನು ಸ್ವಲ್ಪ ನೋಯಿಸಿದೆ ಅನ್ನಿಸುತ್ತೆ. ನಾನು ನನ್ನ ಕೆಲಸಕ್ಕೆ ಹೆಚ್ಚು ಪ್ರಾಮುಖ್ಯತೆ ಕೊಟ್ಟೆ. ನನ್ನ ತಂದೆ ಸೇನೆಯಲ್ಲಿ ಇದ್ದರು. ನಾನೂ ಸೇನೆಗೆ ಹೋಗಿದ್ದರೆ ನೀನು ಮನೆಯಲ್ಲಿ ಒಬ್ಬಳೇ ಇರಬೇಕಿತ್ತು ಅಲ್ಲವೇ... ಎನ್ನುತ್ತಿದ್ದೆ. ಕೆಲಸದಲ್ಲೇ ಬಿಜಿಯಾಗಿಬಿಟ್ಟೆ... ಎನ್ನುತ್ತಾ ಸೋಮಣ್ಣ ಕಣ್ಣೀರಿಟ್ಟಿದ್ದಾರೆ.

ಇಬ್ಬರೂ ಮ್ಯೂಚುವಲ್​ ಆಗಿ ವಿಚ್ಛೇದನ ಪಡೆದವು. ವಿಚ್ಛೇದನಕ್ಕೆ ಅರ್ಜಿ ಹಾಕಿದ ಸಂದರ್ಭದಲ್ಲಿ ಬೆಳಗ್ಗೆ ಕೋರ್ಟ್​ಗೆ ಹೋಗುತ್ತಿದ್ದೆ. ಮಧ್ಯಾಹ್ನ ಸೆಲೆಬ್ರಿಟಿಗಳ ಸಂದರ್ಶನ ಮಾಡುತ್ತಿದ್ದೆ. ಇಬ್ಬರೂ ಡಿವೋರ್ಸ್​ ಪಡೆದೆವು. ಆದರೆ, ಆಕೆಯನ್ನ ಮರೆತು ಬದುಕಲು ಇಂದಿಗೂ ನನಗೆ ಸಾಧ್ಯವಾಗುತ್ತಿಲ್ಲ... ಬಿಗ್​ಬಾಸ್​ ಮನೆಗೆ ಬರುವಾಗ ಅವಳಿಗೆ ನಾನು ಫೋನ್​ ಮಾಡಿದೆ, ಆಗ ಸಮಾಧಾನವಾಯ್ತು... ಎನ್ನುತ್ತಾ ಮತ್ತಷ್ಟು ಭಾವುಕರಾದರು ಸೋಮಣ್ಣ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net