ಧನಂಜಯ್ ನಿಜಕ್ಕೂ ನಟರಾಕ್ಷಸ!; 'ಮಾನ್ಸೂನ್ ರಾಗ’ ಟ್ರೇಲರ್ ಲಾಂಚ್​ನಲ್ಲಿ ರಚಿತಾ ಮಾತು

Rachitha Ram
Published on

ಬೆಂಗಳೂರು: ಎಸ್. ರವೀಂದ್ರನಾಥ್ ನಿರ್ದೇಶನದ ‘ಮಾನ್ಸೂನ್ ರಾಗ’ ಚಿತ್ರದಲ್ಲಿ ನಟಿ ರಚಿತಾ ರಾಮ್ ಲೈಂಗಿಕ ಕಾರ್ಯಕರ್ತೆಯ ಪಾತ್ರದಲ್ಲಿ ನಟಿಸಿದ್ದಾರೆ ಎಂಬುದು ತಿಳಿದಿತ್ತು. ಆದರೆ, ಅವರು ಪಾತ್ರದ ಬಗ್ಗೆ ಎಲ್ಲೂ ಹೆಚ್ಚಾಗಿ ಹೇಳಿಕೊಂಡಿರಲಿಲ್ಲ. ಈಗ ಆ ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು, ರಚಿತಾ ರಾಮ್ ಕೂಡ ಮೌನ ಮುರಿದಿದ್ದಾರೆ. ಟ್ರೇಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತಿಗಿಳಿದಿದ್ದಾರೆ.

‘ಪಾತ್ರದ ಬಗ್ಗೆ ಏನೂ ಹೇಳುವ ಅವಶ್ಯಕತೆ ಇಲ್ಲ ಅನ್ನಿಸುತ್ತೆ. ಏಕೆಂದರೆ, ಟೀಸರ್ ನೋಡಿಯೇ ಗೊತ್ತಾಗಿಬಿಡುತ್ತೆ. ನಾನು ಈ ತಂಡದ ಜತೆ ‘ಪುಷ್ಪಕ ವಿಮಾನ’ ಚಿತ್ರದಲ್ಲಿ ಮೊದಲೇ ಕೆಲಸ ಮಾಡಿದ್ದೆ. ಹಾಗಾಗಿ, ಕಥೆ ಮತ್ತು ಪಾತ್ರ ಹೇಳಿದಾಗ ನಾನೇನೂ ಪ್ರತಿಕ್ರಿಯೆ ಕೊಡಲಿಲ್ಲ. ನನಗೆ ಈ ತಂಡದ ಮೇಲೆ ಅಷ್ಟು ನಂಬಿಕೆ. ನಿಮ್ಮ ಪಾತ್ರವನ್ನು ಹೇಗೆ ಪ್ರೆಸೆಂಟ್ ಮಾಡುತ್ತೇವೆ ಅಂತ ನೋಡಿ, ನಿಮಗೆ ಇಷ್ಟವಾಗಲಿಲ್ಲ ಅಂದರೆ ರೀಶೂಟ್ ಮಾಡುತ್ತೇವೆ ಎಂದಿದ್ದರು. ನಾನು ಇಲ್ಲಿ ವೇಶ್ಯೆಯ ಪಾತ್ರದಲ್ಲಿ ನಟಿಸಿದ್ದೇನೆ. ಈ ಪಾತ್ರವನ್ನು ಹೇಗೆ ಬೇಕಾದರೂ ತೆರೆಯ ಮೇಲೆ ತೋರಿಸಬಹುದು. ಆದರೆ, ಇಲ್ಲಿ ಬಹಳ ಸೂಕ್ಷ್ಮವಾಗಿ ಪಾತ್ರವನ್ನು ರೂಪಿಸಿದ್ದಾರೆ. ಪಾತ್ರಕ್ಕೆ ಸಿದ್ಧತೆ ಅಂತೇನೂ ಮಾಡಿಕೊಳ್ಳಲಿಲ್ಲ. ಅವರೇನು ಹೇಳಿದರೋ ಅದನ್ನು ಮಾಡಿದ್ದೀನಿ ಅಷ್ಟೇ’ ಎನ್ನುತ್ತಾರೆ ರಚಿತಾ ರಾಮ್.

ಇದೇ ಮೊದಲ ಬಾರಿಗೆ ನಟ ಧನಂಜಯ ಜತೆ ತೆರೆ ಹಂಚಿಕೊಂಡಿರುವ ಕುರಿತು ಮಾತನಾಡುವ ರಚಿತಾ, ‘ಅವರಿಗೆ ‘ನಟರಾಕ್ಷಸ’ ಎಂಬ ಬಿರುದು ನಿಜವಾಗಲೂ ಒಪು್ಪತ್ತದೆ. ಅವರ ಜತೆ ಸ್ಪರ್ಧಿಸೋದು ನಿಜಕ್ಕೂ ಸವಾಲೇ ಆಗಿತ್ತು’ ಎನ್ನುತ್ತಾರೆ ರಚಿತಾ. ಇದೇ ಸಮಯದಲ್ಲಿ ಚಿತ್ರತಂಡವನ್ನು ಹೊಗಳುವ ಅವರು, ‘ಕೆಲವೊಮ್ಮೆ ಸಂಜೆ 6 ಗಂಟೆಯಿಂದ ಬೆಳಗ್ಗೆ 6 ಗಂಟೆವರೆಗೆ ಚಿತ್ರೀಕರಣ ಮಾಡಿದ್ದೇವೆ. ನನ್ನ, ಧನಂಜಯ ಅವರ ಎರಡು ಸೀನ್ ಬಿಟ್ಟು, ಉಳಿದ ಶೇಕಡಾ 90ರಷ್ಟು ಸೀನ್​ಗಳನ್ನು ರಾತ್ರಿ ಶೂಟ್ ಮಾಡಿದ್ದೇವೆ. ಕೃತಕ ಮಳೆಯಲ್ಲೂ ಶೂಟ್ ಮಾಡಿದ್ದೇವೆ. ಎಲ್ಲರೂ ಇಷ್ಟ ಪಟ್ಟು ಕೆಲಸ ಮಾಡಿದ್ದಾರೆ. ಹೀಗಾಗಿಯೇ ಟೀಸರ್ ಅಷ್ಟು ಚೆನ್ನಾಗಿ ಮೂಡಿಬಂದಿದೆ’ ಎನ್ನುತ್ತಾರೆ ರಚಿತಾ.

‘ಮಾನ್ಸೂನ್ ರಾಗ’ ಚಿತ್ರಕ್ಕೆ ಅನೂಪ್ ಸೀಳಿನ್ ಸಂಗೀತ ನೀಡಿದ್ದು, ದೀಕ್ಷಿತ್ ಕುಮಾರ್ ಛಾಯಾಗ್ರಹಣ, ಹರೀಶ್ ಕೊಮ್ಮೆ ಸಂಕಲನವಿದೆ. ಧನಂಜಯ, ರಚಿತಾ ಜತೆ ಅಚ್ಯುತ್ ಕುಮಾರ್, ಸುಹಾಸಿನಿ, ಯಶಾ ಶಿವಕುಮಾರ್ ಪ್ರಮುಖ ತಾರಾಗಣದಲ್ಲಿದ್ದಾರೆ. ‘ಮಾನ್ಸೂನ್ ರಾಗ’ ಕೂಡ ಮಳೆಯ ಜತೆಗೇ ಇದೇ ಆಗಸ್ಟ್ 19ರಂದು ರಾಜ್ಯಾದ್ಯಂತ ತೆರೆಗೆ ಬರಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net