

ಸುದೀಪ್ ಅಭಿನಯದ 'ಫ್ಯಾಂಟಮ್' ಚಿತ್ರದಲ್ಲಿ ನಿರೂಪ್ ಭಂಡಾರಿ ಸಹ ಒಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎಂಬ ಸುದ್ದಿ ಇತ್ತಾದರೂ, ಚಿತ್ರದಲ್ಲಿ ಅವರ ಪಾತ್ರವೇನು? ಅವರು ಹೇಗೆ ಕಾಣುತ್ತಾರೆ? ಎಂಬ ಯಾವುದೇ ಪ್ರಶ್ನೆಗಳಿಗೂ ಉತ್ತರ ಸಿಕ್ಕಿರಲಿಲ್ಲ.
ಇದೀಗ ಕೊನೆಗೂ ಆ ಪ್ರಶ್ನೆಗಳಿಗೆ ಉತ್ತರ ಸಿಕ್ಕಿದೆ. ನಿರೂಪ್ ಈ ಚಿತ್ರದಲ್ಲಿ ಸಂಜೀವ್ ಗಂಭೀರಾ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಪಾತ್ರದ ಹೆಸರು ಗೊತ್ತಾಗಿದೆಯಾದರೂ, ಆ ಪಾತ್ರ ಏನು ಮಾಡುತ್ತದೆ ಎಂಬುದನ್ನು ಚಿತ್ರತಂಡ ಬಿಟ್ಟುಕೊಟ್ಟಿಲ್ಲ.
ಇಂದು ನಿರೂಪ್ ಭಂಡಾರಿ ಅವರ ಹುಟ್ಟುಹಬ್ಬ. ಈ ಹಿನ್ನೆಲೆಯಲ್ಲಿ ಚಿತ್ರತಂಡದವರು ನಿರೂಪ್ ಅವರ 'ದಿ ವರ್ಲ್ಡ್ ಆಫ್ ಫ್ಯಾಂಟಮ್' ಸೀರೀಸ್ನಡಿ ನಿರೂಪ್ ಅವರ ಮೊದಲ ಲುಕ್ ಬಿಡುಗಡೆ ಮಾಡಿದ್ದಾರೆ. ಖುದ್ದು ಸುದೀಪ್, ತಮ್ಮ ಟ್ವಿಟರ್ ಹ್ಯಾಂಡಲ್ ಮೂಲಕ ನಿರೂಪ್ ಅವರ ಫಸ್ಟ್ ಲುಕ್ ಬಿಡುಗಡೆ ಮಾಡಿ, ಹುಟ್ಟುಹಬ್ಬಕ್ಕೆ ಶುಭ ಹಾರೈಸಿದ್ದಾರೆ.
'ಫ್ಯಾಂಟಮ್' ಚಿತ್ರದ ಶೂಟಿಂಗ್ ಕಳೆದ ತಿಂಗಳಿನಿಂದ ಹೈದರಾಬಾದ್ನ ಅನ್ನಪೂರ್ಣ ಸ್ಟುಡಿಯೋದಲ್ಲಿ ಸತತವಾಗಿ ನಡೆಯುತ್ತಿದೆ. ಸ್ಟುಡಿಯೋದಲ್ಲಿ ಚಿತ್ರಕ್ಕೆಂದೇ ಕಾಡಿನ ಸೆಟ್ ಹಾಕಲಾಗಿರುವುದು ವಿಶೇಷ. ಈಗಾಗಲೇ ಈ ಸೆಟ್ಗಳಲ್ಲಿ ಚಿತ್ರೀಕರಣವಾದ ಎರಡು ತುಣುಕುಗಳನ್ನು ಬಿಡುಗಡೆ ಮಾಡಲಾಗಿದ್ದು, ಈ ಸ್ನೀಕ್ಪೀಕ್ಗಳ ಬಗ್ಗೆ ಅಭಿಮಾನಿಗಳಿಂದ ಸಿಕ್ಕಾಪಟ್ಟೆ ಮೆಚ್ಚುಗೆ ವ್ಯಕ್ತವಾಗಿದೆ.
ಅನೂಪ್ ಭಂಡಾರಿ ನಿರ್ದೇಶನದಲ್ಲಿ ಸಿದ್ಧವಾಗುತ್ತಿರುವ 'ಫ್ಯಾಂಟಮ್' ಚಿತ್ರದಲ್ಲಿ ಸುದೀಪ್, ವಿಕ್ರಾಂತ್ ರೋಣ ಎಂಬ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಮಿಕ್ಕಂತೆ ಶ್ರದ್ಧಾ ಶ್ರೀನಾಥ್, ನಿರೂಪ್ ಭಂಡಾರಿ ಮುಂತಾದವರು ಅಭಿನಯಿಸುತ್ತಿದ್ದಾರೆ. ಜಾಕ್ ಮಂಜು ನಿರ್ಮಾಣ ಮಾಡುತ್ತಿರುವ ಈ ಚಿತ್ರಕ್ಕೆ ಅಜನೀಶ್ ಲೋಕನಾಥ್ ಸಂಗೀತ ಸಂಯೋಜಿಸುತ್ತಿದ್ದಾರೆ.