ವಿಶಾಲ್​ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ಹೊರಿಸಿದ ಗಾಯತ್ರಿ ರಘುರಾಮ್​

Vishal - Gayathri - Final
Published on

ಚೆನ್ನೈ: ಬಹಳ ವರ್ಷಗಳ ಹಿಂದೆ ಕನ್ನಡದಲ್ಲಿ 'ಮನಸೆಲ್ಲಾ ನೀನೇ' ಎಂಬ ಚಿತ್ರದಲ್ಲಿ ನಟಿಸಿದ್ದ ಗಾಯತ್ರಿ ರಘುರಾಮ್​ ನೆನಪಿದೆಯಾ? ನಟಿಯಾಗಿ, ನೃತ್ಯ ನಿರ್ದೇಶಕಿಯಾಗಿ, 'ಬಿಗ್​ ಬಾಸ್​' ಸ್ಪರ್ಧಿಯಾಗಿ, ರಾಜಕಾರಣಿಯಾಗಿ ಹೆಸರು ಮಾಡಿರುವ ಗಾಯತ್ರಿ, ನಟ-ನಿರ್ಮಾಪಕ ವಿಶಾಲ್​ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪವನ್ನು ಹೊರಿಸಿದ್ದಾರೆ.

ಸೋಷಿಯಲ್​ ಮೀಡಿಯಾದಲ್ಲಿ ಸಕ್ರಿಯವಾಗಿರುವ ಗಾಯತ್ರಿ, ಹಲವು ವಿಷಯಗಳ ಬಗ್ಗೆ ಮಾತಾಡುತ್ತಲೇ ಇರುತ್ತಾರೆ. ಇತ್ತೀಚೆಗೆ ಟ್ವೀಟ್​ ಮಾಡಿರುವ ಅವರು, ವಿಶಾಲ್​ ವಿರುದ್ಧ ಹರಿಹಾಯ್ದಿದ್ದಾರೆ. ಆತನ ಮೇಲೆ ಲೈಂಗಿಕ ದೌರ್ಜನ್ಯದ ಆರೋಪ ಹೊರಿಸಿರುವ ಗಾಯತ್ರಿ, ವಿಶಾಲ್​ ತರಹದವರಿಂದಲೇ ಹೆಣ್ಮಕ್ಕಳು ಚಿತ್ರರಂಗದಲ್ಲಿ ನಿಲ್ಲುವುದಕ್ಕೆ ಸಾಧ್ಯವಾಗುತ್ತಿಲ್ಲ ಎಂದಿದ್ದಾರೆ.

ಇತ್ತೀಚೆಗೆ, ಚೆನ್ನೈನ ಶಾಲೆಯೊಂದರಲ್ಲಿ ನಡೆದ ಲೈಂಗಿಕ ದೌರ್ಜನ್ಯದ ಕುರಿತಾಗಿ ವಿಶಾಲ್​ ಮಾತನಾಡಿದ್ದರು. ಈ ದೌರ್ಜನ್ಯವನ್ನು ಖಂಡಿಸಿ ಸೋಷಿಯಲ್​ ಮೀಡಿಯಾದಲ್ಲಿ ಪೋಸ್ಟ್​ ಹಾಕಿದ್ದರು. ಈ ಕುರಿತು ಮಾತನಾಡಿರುವ ಗಾಯತ್ರಿ, ಬೇರೆ ಕ್ಷೇತ್ರಗಳಲ್ಲಾಗುತ್ತಿರುವ ಲೈಂಗಿಕ ದೌರ್ಜನ್ಯಗಳನ್ನು ಖಂಡಿಸುವ ಬದಲು, ಸಿನಿಮಾ ಕ್ಷೇತ್ರದಲ್ಲಾಗುತ್ತಿರುವ ದೌರ್ಜನ್ಯವನ್ನು ಮೊದಲು ಮಾತನಾಡಿ ಎಂದು ಅವರು ಹೇಳಿದ್ದಾರೆ.

ಈ ಕುರಿತು ಟ್ವೀಟ್​ ಮಾಡಿರುವ ಅವರು, 'ಬೇರೆ ಕ್ಷೇತ್ರಗಳಲ್ಲಾಗುತ್ತಿರುವ ಸಮಸ್ಯೆಗಳ ಬಗ್ಗೆ ಖಂಡಿಸುವ ಬದಲು, ಮೊದಲು ಸಿನಿಮಾ ಕ್ಷೇತ್ರದತ್ತ ನೋಡಿ. ಬಹಳಷ್ಟು ಹೊಸ ಹುಡುಗಿಯರು, ನಾಯಕಿಯರು ಇಲ್ಲಿ ಶೋಷಣೆಗೆ ಒಳಗಾಗುತ್ತಿದ್ದಾರೆ. ನೀವು ಮತ್ತು ನಿಮ್ಮ ಸ್ನೇಹಿತರು ಸಹ ಅದೇ ಉಪಯೋಗಿಸಿ ಬಿಸಾಡುವ ವರ್ಗಕ್ಕೆ ಸೇರುತ್ತೀರಿ. ನಿಮ್ಮಿಂದ ಹಲವರು ಶೋಷಣೆಗೆ ಒಳಗಾಗಿದ್ದಾರೆ' ಎಂದು ಅವರು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net