ಎರಡು ಲಾಕ್​ಡೌನ್​ಗಳು, ಎರಡು ಚಂಡಮಾರುತಗಳು ... ಇವೆರಡರ ಮಧ್ಯೆ ಒಂದು ಅದ್ಭುತ ಅನುಭವ

Aalia Bhatt - Final
Published on

ಮುಂಬೈ: ಅಂತೂ ಸಂಜಯ್​ ಲೀಲಾ ಬನ್ಸಾಲಿ ನಿರ್ದೇಶನದ, ಆಲಿಯಾ ಭಟ್​ ಅಭಿನಯದ 'ಗಂಗೂಬಾಯಿ ಕಥಿಯಾವಾಡಿ' ಚಿತ್ರದ ಚಿತ್ರೀಕರಣ ಮುಗಿದಿದೆ. 2019ರ ಡಿಸೆಂಬರ್​ನಲ್ಲಿ ಪ್ರಾರಂಭವಾದ ಈ ಚಿತ್ರದ ಚಿತ್ರೀಕರಣ, ಕಳೆದ ವರ್ಷವೇ ಮುಗಿದು, ಇಷ್ಟರಲ್ಲಿ ಬಿಡುಗಡೆಯಾಗಬೇಕಿತ್ತು. ಆದರೆ, ಲಾಕ್​ಡೌನ್​ನಿಂದಾಗಿ ಚಿತ್ರೀಕರಣ ತಡವಾಗಿದ್ದು, ಇದೀಗ ಮುಗಿದಿದೆ.

ಇತ್ತೀಚೆಗಷ್ಟೇ ಚಿತ್ರದ ಕೊನೆಯ ಹಂತದ ಚಿತ್ರೀಕರಣ ಮುಗಿದಿದ್ದು, ಆಲಿಯಾ ಭಟ್​ ನೆನಪುಗಳನ್ನು ಹಂಚಿಕೊಂಡಿದ್ದಾರೆ. ಸೋಷಿಯಲ್​ ಮೀಡಿಯಾದಲ್ಲಿ ಈ ಕುರಿತು ಬರೆದುಕೊಂಡಿರುವ ಆಲಿಯಾ ಭಟ್​, ಚಿತ್ರದಲ್ಲಿ ನಟಿಸುವುದಕ್ಕೆ ಅವಕಾಶ ಕೊಟ್ಟ ಬನ್ಸಾಲಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ.

ಈ ಕುರಿತು ಬರೆದುಕೊಂಡಿರುವ ಅವರು, 'ಗಂಗೂಬಾಯಿ ಚಿತ್ರದ ಚಿತ್ರೀಕರಣ 2019ರ ಡಿಸೆಂಬರ್​ 8ರಂದು ಪ್ರಾರಂಭವಾಗಿತ್ತು. ಅದಾಗಿ ಒಂದೂವರೆ ವರ್ಷಗಳ ನಂತರ ಚಿತ್ರೀಕರಣ ಮುಗಿದಿದೆ. ಈ ಸಮಯದಲ್ಲಿ ಎರಡು ಲಾಕ್​ಡೌನ್​ಗಳು, ಎರಡು ಚಂಡಮಾರುತಗಳನ್ನು ನೋಡಿದ್ದೇವೆ. ನಾನು ಮತ್ತು ನಿರ್ದೇಶಕರಿಬ್ಬರು ಕರೊನಾದಿಂದ ಕ್ವಾರಂಟೈನ್​ಗೆ ಒಳಪಡಬೇಕಾಯಿತು. ಇದೆಲ್ಲದರ ಮಧ್ಯೆ, ಒಂದು ಅದ್ಭುತವಾದ ಅನುಭವವಿದೆ' ಎಂದು ಆಲಿಯಾ ಬರೆದುಕೊಂಡಿದ್ದಾರೆ.

'ಬನ್ಸಾಲಿ ಅವರ ನಿರ್ದೇಶನದಲ್ಲಿ ಕೆಲಸ ಮಾಡಬೇಕು ಎಂಬುದು ನನ್ನ ಜೀವನದ ಕನಸಾಗಿತ್ತು. ಅದು ನನಸಾಗಿದೆ. ಇವತ್ತು ಹೊಸ ಮನುಷ್ಯಳಾಗಿ ನಾನು ಹೊರಬರುತ್ತಿದ್ದೇನೆ. ಬನ್ಸಾಲಿ ಅವರನ್ನು ಬಹಳ ಇಷ್ಟಪಡುತ್ತೇನೆ. ಅವರ ತರಹ ಇನ್ನೊಬ್ಬರನ್ನು ನಾನು ನೋಡಿಲ್ಲ. ಒಂದು ಚಿತ್ರ ಮುಗಿದಾಗ, ನಿಮ್ಮ ಒಂದು ಭಾಗ ಮುಗಿದಂತಾಗುತ್ತದೆ. ಇವತ್ತು ನನ್ನಲ್ಲಿದ್ದ ಗಂಗೂ ಮುಗಿದಂತಾಗಿದೆ' ಎಂದು ಅವರು ಹೇಳಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net