

ಬೆಂಗಳೂರು: ಕಳೆದ ವರ್ಷ ಗಣೇಶ್ ಅಭಿನಯದ ಮೂರು ಚಿತ್ರಗಳು ಬಿಡುಗಡೆಯಾಗಿದ್ದವು. ಈ ವರ್ಷ ಸಹ ಗಣೇಶ್ ಅಭಿನಯದ ಒಂದೆರೆಡು ಚಿತ್ರಗಳು ಬಿಡುಗಡೆಯಾಗಬಹುದು ಎಂಬ ನಿರೀಕ್ಷೆಯಲ್ಲಿರುವಾಗಲೇ, ಲಾಕ್ಡೌನ್ನಿಂದಾಗಿ ಅದು ಸುಳ್ಳಾಗಿದೆ. ಈ ವರ್ಷ ಗಣೇಶ್ ಅಭಿನಯದ ಯಾವೊಂದು ಚಿತ್ರ ಬಿಡುಗಡೆಯಾಗದಿದ್ದರೂ, ಮುಂದಿನ ತಿಂಗಳಿನಿಂದ ಚಿತ್ರೀಕರಣಕ್ಕೆ ಹೋಗುವುದಕ್ಕೆ ಅವರು ತಯಾರಿ ನಡೆಸಿದ್ದಾರೆ.
ಈ ವರ್ಷದ ಆರಂಭದಲ್ಲೇ ಗಣೇಶ್, 'ತ್ರಿಬಲ್ ರೈಡಿಂಗ್' ಎಂಬ ಚಿತ್ರದಲ್ಲಿ ನಟಿಸುತ್ತಾರೆ ಎಂಬ ಸುದ್ದಿ ಇತ್ತು. ಈ ಚಿತ್ರದ ಚಿತ್ರೀಕರಣ ಅಕ್ಟೋಬರ್ ಎರಡನೇ ವಾರದಲ್ಲಿ ಆರಂಭವಾಗಲಿದೆ. ಸದ್ಯ ಹೈದರಾಬಾದ್ ನಲ್ಲಿ ಹಾಡುಗಳ ಧ್ವನಿಮುದ್ರಣ ನಡೆಯುತ್ತಿದೆ.
ಕಾಮಿಡಿ, ಲವ್, ಆಕ್ಷನ್ ಹಾಗೂ ಸಸ್ಪೆನ್ಸ್ ಥ್ರಿಲ್ಲರ್ ಕಥಾಹಂದರವಿರುವ ಈ ಚಿತ್ರವನ್ನು ಮಹೇಶ್ ಗೌಡ ನಿರ್ದೇಶಿಸುತ್ತಿದ್ದಾರೆ. ಈ ಹಿಂದೆ ವಿನೋದ್ ಪ್ರಭಾಕರ್ ಅಭಿನಯದ 'ರಗೆಡ್' ಚಿತ್ರವನ್ನು ನಿರ್ದೇಶಿಸಿದ್ದ, ಮಹೇಶ್ ಗೌಡ ಅವರಗೆ ಇದು ಎರಡನೇ ಚಿತ್ರ. ಈ ಹಿಂದೆ, ಯೋಗರಾಜ್ ಭಟ್ ನಿರ್ದೇಶನದ 'ಮುಂಗಾರು ಮಳೆ' ಚಿತ್ರಕ್ಕೆ ನಿರ್ದೇಶನ ವಿಭಾಗದಲ್ಲಿ ಕೆಲಸ ಮಾಡಿದ್ದ ಮಹೇಶ್ ಗೌಡ ಅವರಿಗೆ ಆಗಿನಿಂದಲೂ ಗಣೇಶ್ ಅಭಿನಯದಲ್ಲಿ ಒಂದು ಚಿತ್ರ ನಿರ್ದೇಶಿಸಬೇಕು ಎಂಬ ಆಸೆ ಇತ್ತಂತೆ. ಅದು ಈಗ ಕೂಡಿ ಬಂದಿದೆ ಎನ್ನುತ್ತಾರೆ ಮಹೇಶ್ ಗೌಡ.
ಗಣೇಶ್ಗೆ ನಾಯಕಿಯ ಹುಡುಕಾಟ ನಡೆದಿದ್ದು, ಸದ್ಯದಲ್ಲೇ ಅಂತಿಮವಾಗಲಿದೆ ಎಂದು ಹೇಳಲಾಗುತ್ತಿದೆ. ಮಿಕ್ಕಂತೆ ಸಾಧು ಕೋಕಿಲ, ರವಿಶಂಕರ್ ಗೌಡ, ಕುರಿ ಪ್ರತಾಪ್ ಮುಂತಾದವರ ತಾರಾಬಳಗ 'ತ್ರಿಬಲ್ ರೈಡಿಂಗ್' ಚಿತ್ರದಲ್ಲಿರಲಿದೆ.
ರಾಮ್ಗೋಪಾಲ್ ಎನ್ನುವವರು ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಸಾಯಿಕಾರ್ತಿಕ್ ಮ್ಯೂಸಿಕ್ ಕಂಪೋಸ್ ಮಾಡಿದರೆ, ಆನಂದ್ ಛಾಯಾಗ್ರಹಣ ಮಾಡಲಿದ್ದಾರೆ.