ಇಟಲಿಯತ್ತ ಗಣೇಶ್ ಮತ್ತು ತಂಡ ; ‘ಕೃಷ್ಣಂ ಪ್ರಣಯ ಸಖಿ’ ಚಿತ್ರದ ಹಾಡುಗಳ ಶೂಟಿಂಗ್​ಗೆ ಪಯಣ

Poster
Published on

ವಿಜಯವಾಣಿ ಸುದ್ದಿಜಾಲ ಬೆಂಗಳೂರು

‘ದಂಡುಪಾಳ್ಯ’ ಸರಣಿಯ ನಿರ್ದೇಶಕ ಶ್ರೀನಿವಾಸ ರಾಜು ಆ್ಯಕ್ಷನ್-ಕಟ್ ಹೇಳುತ್ತಿರುವ ಸಿನಿಮಾ ‘ಕೃಷ್ಣಂ ಪ್ರಣಯ ಸಖಿ’. ಆ ಮೂಲಕ ಕ್ರೈಮ್ ಡ್ರಾಮಾ ಜಾನರ್‌ನಿಂದ ರೊಮ್ಯಾಂಟಿಕ್ ಕಾಮಿಡಿಗೆ ಶ್‌ಟಿ ಆಗಿದ್ದಾರೆ ಶ್ರೀನಿವಾಸ ರಾಜು. ಚಿತ್ರಕ್ಕೆ ಗಣೇಶ್ ನಾಯಕನಾಗಿದ್ದು, ಇದು ಅವರ 41ನೇ ಸಿನಿಮಾ. ಕಳೆದ ವರ್ಷ ‘ಬಾನದಾರಿಯಲ್ಲಿ’ ಚಿತ್ರದಲ್ಲಿ ಮಿಂಚಿದ್ದ ಗಣೇಶ್, ಇದೀಗ ‘ಕೃಷ್ಣಂ ಪ್ರಣಯ ಸಖಿ’ ಚಿತ್ರೀಕರಣದಲ್ಲಿ ಬಿಜಿಯಾಗಿದ್ದಾರೆ.

ಹೊಸ ವರ್ಷದ ಸಂಭ್ರಮದಲ್ಲಿ ಚಿತ್ರತಂಡ ಗಣೇಶ್ ಲುಕ್ ಬಿಡುಗಡೆ ಮಾಡಿದೆ. ಜತೆಗೆ ಹಾಡುಗಳ ಚಿತ್ರೀಕರಣದ ಕುರಿತು ಹೊಸ ಮಾಹಿತಿಯನ್ನೂ ನೀಡಿದೆ. ಚಿತ್ರದ ಮಾತುಗಳ ಭಾಗದ ಶೂಟಿಂಗ್ ಪೂರ್ಣಗೊಂಡಿದ್ದು, ಎರಡು ಹಾಡುಗಳ ಚಿತ್ರೀಕರಣಕ್ಕಾಗಿ ಇಟಲಿ ಮತ್ತು ಮಾಲ್ಟಾಗೆ ಹೋಗಲು ಚಿತ್ರತಂಡ ಸಿದ್ದತೆ ಮಾಡಿಕೊಳ್ಳುತ್ತಿದೆ. ಗಣೇಶ್ ಅವರಿಗೆ ಚಿತ್ರದಲ್ಲಿ ಇಬ್ಬರು ನಾಯಕಿಯರಿದ್ದು ಮಾಳವಿಕಾ ನಾಯರ್ ಮತ್ತು ಶರಣ್ಯ ಶೆಟ್ಟಿ ನಟಿಸುತ್ತಿದ್ದಾರೆ. 15ಕ್ಕೂ ಅಧಿಕ ತಮಿಳು, ತೆಲುಗು ಹಾಗೂ ಮಲಯಾಳಂ ಚಿತ್ರಗಳಲ್ಲಿ ನಟಿಸಿರುವ ಮಾಳವಿಕಾ ಅವರಿಗೆ ಇದು ಚೊಚ್ಚಲ ಕನ್ನಡ ಸಿನಿಮಾ. ಇನ್ನು ಮತ್ತೊಬ್ಬ ನಾಯಕಿ ಶರಣ್ಯ ಶೆಟ್ಟಿ 2021ರಲ್ಲಿ ರಿಲೀಸ್ ಆದ ‘1980’ ಚಿತ್ರದಲ್ಲಿ ಪ್ರಿಯಾಂಕಾ ಉಪೇಂದ್ರ ಜತೆ ನಟಿಸಿದ್ದರು. ನಾಯಕ, ನಾಯಕಿಯರು ಸೇರಿ 30 ಜನರ ತಂಡ ಇನ್ನು ಕೆಲವೇ ದಿನಗಳಲ್ಲಿ ಇಟಲಿಗೆ ಪ್ರಯಾಣ ಬೆಳೆಸಲಿದೆ.

ಚಿತ್ರದಲ್ಲಿ ಐದು ಹಾಡುಗಳಿದ್ದು ಅರ್ಜುನ್ ಜನ್ಯ ಸಂಗೀತವಿರಲಿದೆ. ಹಾಗೇ ವೆಂಕಟ್ ಪ್ರಸಾದ್ ಛಾಯಾಗ್ರಹಣ, ಕೆ.ಎಂ. ಪ್ರಕಾಶ್ ಸಂಗಲನದಲ್ಲಿ ‘ಕೃಷ್ಣಂ ಪ್ರಣಯ ಸಖಿ’ ಮೂಡಿಬರಲಿದೆ. ಗಣೇಶ್, ಮಾಳವಿಕಾ, ಶರಣ್ಯ ಜತೆ ಶ್ರೀನಿವಾಸಮೂರ್ತಿ, ಸಾಧು ಕೋಕಿಲ, ರಂಗಾಯಣ ರಘು, ಶಶಿಕುಮಾರ್, ಶ್ರುತಿ, ಭಾವನಾ, ಅಶೋಕ್, ರಾಮಕೃಷ್ಣ, ಶಿವಧ್ವಜ್ ಚಿತ್ರದ ಪ್ರಮುಖ ತಾರಾಬಳಗದಲ್ಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net