

ವಿಜಯವಾಣಿ ಸುದ್ದಿಜಾಲ ಬೆಂಗಳೂರು:
ಎಲ್ಲ ಶಾಲೆ, ಕಾಲೇಜುಗಳಲ್ಲೂ ಡಿಸ್ಟಿಂಕ್ಷನ್ ಬಂದವರಿಗೆ, ಹೆಚ್ಚು ಅಂಕ ಪಡೆದವರಿಗೆ ಮೊದಲ ಅವಕಾಶ. ಆದರೆ, ಜಸ್ಟ್ ಪಾಸ್ ಆದವರ ಕಥೆ ಕೇಳುವವರಿಲ್ಲ. ಆದರೆ, ರಂಗಾಯಣ ರಘು ಅಂತಹ ಜಸ್ಟ್ ಪಾಸ್ ವಿದ್ಯಾರ್ಥಿಗಳಿಗೆಂದೇ ಒಂದು ಕಾಲೇಜು ಪ್ರಾರಂಭಿಸಿದ್ದಾರೆ. ಕೆ.ಎಂ.ರಘು ನಿರ್ದೇಶಿಸುತ್ತಿರುವ ‘ಜಸ್ಟ್ ಪಾಸ್’ ಎಂಬ ಸಿನಿಮಾದಲ್ಲಿ. ಅವರೇ ಈ ಕಾಲೇಜಿಗೆ ಪ್ರಿನ್ಸಿಪಲ್. ಜತೆಗೆ ಹಾಸ್ಟೆಲ್ ಕೂಡ ಉಚಿತ. ತಮ್ಮ ಜೀವಮಾನದ ಗಳಿಕೆಯನ್ನು ಕೂಡಿಟ್ಟು, ವಿದ್ಯಾರ್ಥಿಗಳ ಬಾಳಿಗೆ ಬೆಳಕಾಗುವ ಗುರುವಿನ ಪಾತ್ರದಲ್ಲಿ ರಂಗಾಯಣ ರಘು ಕಾಣಿಸಿಕೊಳ್ಳಲಿದ್ದಾರೆ.
ಜಸ್ಟ್ ಪಾಸ್ ಆದವರಲ್ಲಿ ಕೆಲವರು ಪ್ರತಿಭಾನ್ವಿತ ವಿದ್ಯಾರ್ಥಿಗಳು, ಕೆಲವರು ತಲೆಹರಟೆಗಳು ಇರುತ್ತಾರೆ. ಅವರನ್ನೆಲ್ಲ ನಿಭಾಯಿಸುತ್ತಾ, ಎಲ್ಲರಿಗೂ ಒಂದೊಳ್ಳೆ ದಾರಿ ಹೇಗೆ ಕಲ್ಪಿಸುತ್ತಾರೆ ಎಂಬುದೇ ‘ಜಸ್ಟ್ ಪಾಸ್’ ಚಿತ್ರದ ಒನ್‌ಲೈನ್. ಶ್ರೀ ಈ ಚಿತ್ರದ ನಾಯಕನಾಗಿದ್ದು, ಅವರಿಗೆ ಯುವಪ್ರತಿಭೆ ಪ್ರಣತಿ ನಾಯಕಿಯಾಗಿದ್ದಾರೆ. ರಂಗಾಯಣ ರಘು, ಸಾಧು ಕೋಕಿಲ, ಪ್ರಕಾಶ್ ತುಮ್ಮಿನಾಡು, ದೀಪಕ್ ರೈ, ದಾನಪ್ಪ, ಗೋವಿಂದೇಗೌಡ ಪ್ರಮುಖ ತಾರಾಗಣದಲ್ಲಿದ್ದಾರೆ.
ನಿರ್ದೇಶಕ ರಘು, ‘ಕಥೆಗೆ ಎಷ್ಟು ತೂಕವಿದೆಯೋ, ರಂಗಾಯಣ ರಘು ಅವರ ಪಾತ್ರಕ್ಕೂ ಅಷ್ಟೇ ತೂಕವಿದೆ. ಅವರು ಪ್ರಿನ್ಸಿಪಲ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಅವರದೇ ಕಾಲೇಜು, ತೂಕದ ವ್ಯಕ್ತಿತ್ವ, ರಾಷ್ಟ್ರಪ್ರಶಸ್ತಿ ಪಡೆದ, ಸದಾ ಸಮಾಜಮುಖಿಯಾಗಿ ಚಿಂತಿಸುವ ಪಾತ್ರ. ಮೂರು ಪಂಚೆ, ಮೂರು ಶರ್ಟ್, ಕೋಟು ಮತ್ತು ಎರಡು ಪೇಟವಷ್ಟೇ ಇರುವ ಸೀದಾಸಾದಾ ಮನುಷ್ಯ’ ಎಂದು ಮಾಹಿತಿ ನೀಡುತ್ತಾರೆ. ಉಳಿದಂತೆ ಚಿತ್ರಕ್ಕೆ ಹರ್ಷವರ್ಧನ್ ರಾಜ್ ಸಂಗೀತ, ಸುಜ್ ಛಾಯಾಗ್ರಹಣವಿರಲಿದೆ.