

ಬೆಂಗಳೂರು: ಪುನೀತ್ ರಾಜಕುಮಾರ್ ಅಭಿನಯದ ಕೊನೆಯ ಚಿತ್ರವಾದ 'ಗಂಧದ ಗುಡಿ', ಶುಕ್ರವಾರ ಬಿಡುಗಡೆಯಾಗಿ ರಾಜ್ಯಾದ್ಯಂತ ಯಶಸ್ವಿ ಪ್ರದರ್ಶನವನ್ನು ಕಾಣುತ್ತಿದೆ. ಚಿತ್ರ ಬಿಡುಗಡೆಯಾದ ಈ ಮೂರು ದಿನಗಳಲ್ಲಿ ಚಿತ್ರ ಗಳಿಸಿದ್ದೆಷ್ಟು ಎಂಬ ಚರ್ಚೆ ಶುರುವಾಗಿದೆ.
'ಗಂಧದ ಗುಡಿ' ಚಿತ್ರವು ರಾಜ್ಯಾದ್ಯಂತ 223ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ದೊಡ್ಡ ಬಿಡುಗಡೆ ಆಗಿತ್ತು. ಸಾಮಾನ್ಯವಾಗಿ ಒಂದು ಚಿತ್ರಮಂದಿರದಲ್ಲಿ ನಾಲ್ಕರಿಂದ ಐದು ಪ್ರದರ್ಶನಗಳು ಕಾಣುತ್ತವೆ. ಆದರೆ, 'ಗಂಧದ ಗುಡಿ' ಚಿತ್ರದ ಅವಧಿ ಒಂದೂವರೆ ತಾಸು ಮಾತ್ರ. ಅಲ್ಲಿಗೆ ನಾಲ್ಕು, ಐದು ಪ್ರದರ್ಶನಗಳು ಮಾಡುತ್ತಿದ್ದ ಚಿತ್ರಮಂದಿರಗಳು ಸಹ ಪ್ರದರ್ಶನಗಳನ್ನು ಹೆಚ್ಚಿಸಿವೆ. ಈ ಲೆಕ್ಕದಲ್ಲಿ ಚಿತ್ರವು ಮೂರು ದಿನಗಳಲ್ಲಿ ನಾಲ್ಕು ಸಾವಿರಕ್ಕೂ ಹೆಚ್ಚು ಪ್ರದರ್ಶನಗಳನ್ನು ಕಂಡಿದ್ದು, ಈ 4000 ಪ್ರದರ್ಶನಗಳಿಂದ ಭಾನುವಾರದ ಅಂತ್ಯಕ್ಕೆ 18ರಿಂದ 20 ಕೋಟಿ ರೂ. ಗಳಿಕೆ ಆಗಲಿದೆ ಎಂದು ಹೇಳಲಾಗುತ್ತಿದೆ.
ಶುಕ್ರವಾರ ಕೆಲವು ಚಿತ್ರಮಂದಿರಗಳಲ್ಲಿ ಬೆಳಿಗ್ಗೆ 7 ಗಂಟೆಯಿಂದಲೇ ಪ್ರದರ್ಶನ ಪ್ರಾರಂಭವಾಗಿವೆ. ಈ ಮೂರು ದಿನಗಳಲ್ಲಿ ಬಹುತೇಕ ಎಲ್ಲ ಪ್ರದರ್ಶನಗಳು ಹೌಸ್ಫುಲ್ ಆಗಿದ್ದು, ಇದು ಇನ್ನಷ್ಟು ದಿನಗಳ ಕಾಲ ಮುಂದುವರೆಯುವ ಸಾಧ್ಯತೆ ಇದೆ. ಒಟ್ಟಾರೆ. ಮುಂದಿನ ನಾಲ್ಕು ದಿನಗಳಲ್ಲಿ ಚಿತ್ರವು ಇನ್ನೂ 10 ಕೋಟಿ ಗಳಿಸುವ ನಿರೀಕ್ಷೆ ಇದ್ದು, ವಾರಾಂತ್ಯಕ್ಕೆ ಚಿತ್ರವು 30 ಕೋಟಿ ರೂ. ಕಲೆಕ್ಷನ್ ಮಾಡುವ ನಿರೀಕ್ಷೆ ಎಂದು ಮಾತು ಚಿತ್ರರಂಗದ ವಲಯದಲ್ಲಿ ಕೇಳಿಬರುತ್ತಿದೆ.
'ಗಂಧದ ಗುಡಿ' ಚಿತ್ರವು ಕರ್ನಾಟಕದ ಪ್ರಾಕೃತಿಕ ಮತ್ತು ವನ್ಯ ಸಂಪತ್ತಿನ ಕುರಿತಾದ ಸಾಕ್ಷ್ಯಚಿತ್ರವಾಗಿದ್ದು, ಇದನ್ನು ಅಮೋಘವರ್ಷ ನಿರ್ದೇಶನ ಮಾಡಿದ್ದಾರೆ. ನಿರ್ದೇಶನದ ಜತೆಗೆ ಅಮೋಘವರ್ಷ, ಚಿತ್ರದಲ್ಲೊಂದು ಪ್ರಮುಖ ಪಾತ್ರದಲ್ಲೂ ಕಾಣಿಸಿಕೊಂಡಿದ್ದಾರೆ. ಈ ಚಿತ್ರವನ್ನು ಪಿಆರ್ಕೆ ಪ್ರೊಡಕ್ಷನ್ಸ್ನಡಿ ನಿರ್ಮಾಣ ಮಾಡಲಾಗಿದೆ.