ಗೇಮ್​​ ಚೇಂಜರ್​ HD ಪ್ರಿಂಟ್​ ಲೀಕ್​! ಖಾಸಗಿ ಬಸ್​ಗಳಲ್ಲಿ​ ಸಿನಿಮಾ ಪ್ರದರ್ಶನ, ವಿಡಿಯೋ ವೈರಲ್​...Game Changer

Game Changer
Published on

Game Changer : ಕುಂಬಾರನಿಗೆ ವರುಷ ದೊಣ್ಣೆಗೆ ನಿಮಿಷ ಎಂಬ ಗಾದೆ ಮಾತು ಸಿನಿಮಾ ರಂಗದಲ್ಲಿ ಪೈರಸಿ ವಿಚಾರಕ್ಕೆ ಬಹಳ ಸೂಕ್ತವಾಗಿದೆ. ಕೋಟಿಗಟ್ಟಲೆ ಹಣ ವ್ಯಯಿಸಿ, ತಿಂಗಳುಗಟ್ಟಲೇ ದೇಶ-ವಿದೇಶ ಅಲೆದು ನಿರ್ಮಾಪಕರು ಸಿನಿಮಾವನ್ನು ನಿರ್ಮಾಣ ಮಾಡುತ್ತಾರೆ. ಆದರೆ, ಕೆಲ ಕಿಡಿಗೇಡಿಗಳು ಕೇವಲ ಒಂದೇ ದಿನದಲ್ಲಿ ಚಿತ್ರವನ್ನು ರೆಕಾರ್ಡ್​ ಮಾಡಿ ಅದರ ಲಿಂಕ್​ ಅನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್​ ಮಾಡುವ ಮೂಲಕ ನಿರ್ಮಾಪಕರ ಜೇಬಿಗೆ ಕತ್ತರಿ ಹಾಕಿಬಿಡುತ್ತಾರೆ.

ಇದೀಗ ಈ ಪೈರಸಿ ಕಾಟವನ್ನು ಟಾಲಿವುಡ್ ಸ್ಟಾರ್​ ನಟ ರಾಮ್​ಚರಣ್​ ಅಭಿನಯದ ಗೇಮ್​ ಚೇಂಜರ್​ ಸಿನಿಮಾ ಎದುರಿಸುತ್ತಿದೆ. ಈ ಸಿನಿಮಾ ಶುಕ್ರವಾರವಷ್ಟೇ ಬಿಡುಗಡೆಯಾಯಿತು. ಮೊದಲ ದಿನ ಮಿಶ್ರ ಪ್ರತಿಕ್ರಿಯೆ ಪಡೆದರೂ, ಪ್ರಸ್ತುತ ಚಿತ್ರಮಂದಿರಗಳಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿದೆ. ಸಂಕ್ರಾಂತಿಯ ರಜಾದಿನಗಳು ಚಿತ್ರದ ಗಳಿಕೆಗೆ ಸಹಾಯ ಮಾಡಿವೆ. ಗೇಮ್ ಚೇಂಜರ್ ಚಿತ್ರವು ಮೊದಲ ದಿನವೇ 186 ಕೋಟಿ ರೂಪಾಯಿ ಗಳಿಕೆ ಮಾಡಿದೆ ಎಂದು ಚಿತ್ರತಂಡ ಅಧಿಕೃತವಾಗಿ ಘೋಷಿಸಿದೆ.

ಆದಾಗ್ಯೂ, ಈ ಸಿನಿಮಾ ಒಂದೇ ದಿನದಲ್ಲಿ ಪೈರಸಿಯಾಗಿದೆ. ಚಿತ್ರ ಬಿಡುಗಡೆಯಾದ ಮರುದಿನವೇ ಗೇಮ್ ಚೇಂಜರ್ ಚಿತ್ರದ HD ಕಾಪಿ ಪೈರಸಿ ಮಾಡಲಾಗಿದೆ. ಇದಲ್ಲದೆ, ಸಂಕ್ರಾಂತಿಗೆ ಹೈದರಾಬಾದ್‌ನಿಂದ ಆಂಧ್ರಕ್ಕೆ ಹೋಗುವ ಬಸ್‌ಗಳಲ್ಲಿ ಗೇಮ್ ಚೇಂಜರ್ ಚಿತ್ರದ ಪೈರಸಿ ಮುದ್ರಣವನ್ನು ಪ್ರದರ್ಶನ ಮಾಡಲಾಗಿದೆ. ಇದಕ್ಕೆ ಸಂಬಂಧಿಸಿದ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವುದರಿಂದ ರಾಮ್​ಚರಣ್​ ಅಭಿಮಾನಿಗಳು ಆಘಾತಕ್ಕೊಳಗಾಗಿದ್ದಾರೆ.

ಸಾಮಾನ್ಯವಾಗಿ ಖಾಸಗಿ ಬಸ್‌ಗಳಲ್ಲಿ ಸಿನಿಮಾಗಳನ್ನು ಪ್ರದರ್ಶಿಸಲಾಗುತ್ತದೆ. ಆದರೆ, ಬಿಡುಗಡೆಯಾಗಿ ತುಂಬಾ ದಿನಗಳು ಕಳೆದ ಸಿನಿಮಾಗಳನ್ನು ಮಾತ್ರ ಬಸ್​ಗಳಲ್ಲಿ ಪ್ರದರ್ಶಿಸಲಾಗುತ್ತಿದೆ. ಆದರೆ, ಇಲ್ಲಿ ನಡೆದಿರುವುದೇ ಬೇರೆ. ಸಿನಿಮಾ ಬಿಡುಗಡೆಯಾದ ಒಂದೇ ದಿನದಲ್ಲಿ ಬಸ್​ಗಳ ಟಿವಿಯಲ್ಲಿ ಸಿನಿಮಾ ಪ್ರದರ್ಶನ ಮಾಡಲಾಗಿದೆ. ಅದು ಕೂಡ ಸ್ಟಾರ್​ ನಟನ ಸಿನಿಮಾ ಎಂಬುದೇ ಅಚ್ಚರಿಯ ಸಂಗತಿ. ಪೈರಸಿ ಸಂಬಂಧಿಸಿದ ವಿಡಿಯೋಗಳನ್ನು ನೋಡಿ ಸಿನಿಮಾ ಪ್ರಿಯರು ಕೋಪಗೊಂಡಿದ್ದಾರೆ. ಈ ಬಗ್ಗೆ ಚಿತ್ರತಂಡ ಗಂಭೀರ ಕ್ರಮ ಕೈಗೊಳ್ಳಬೇಕೆಂದು ಅಭಿಮಾನಿಗಳು ಆಗ್ರಹಿಸಿದ್ದಾರೆ. ಇದಕ್ಕೆ ಚಿತ್ರತಂಡ ಹೇಗೆ ಪ್ರತಿಕ್ರಿಯಿಸುತ್ತದೆ ಎಂಬುದನ್ನು ಕಾದು ನೋಡಬೇಕಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net