

Jowar Roti : ಹಿಂದಿನ ಕಾಲಕ್ಕೆ ಹೋಲಿಸಿದರೆ ಈ ಆಧುನಿಕ ಕಾಲದಲ್ಲಿ ಆಹಾರ ಪದ್ಧತಿಯಲ್ಲಿ ಭಾರಿ ಬದಲಾವಣೆಗಳಾಗಿವೆ. ಈ ಹಿಂದೆ, ಜನರು ಸಜ್ಜೆ, ಜೋಳ ಮತ್ತು ರಾಗಿಗಳಂತಹ ಸಣ್ಣ ಧಾನ್ಯಗಳಿಂದ ತಯಾರಿಸಿದ ಆಹಾರವನ್ನು ಹೆಚ್ಚಾಗಿ ತಯಾರಿಸಿ ತಿನ್ನುತ್ತಿದ್ದರು. ಹೀಗಾಗಿಯೇ ಆ ಕಾಲದ ಜನರು ತುಂಬಾ ಬಲಿಷ್ಠವಾಗಿದ್ದರು ಮತ್ತು ಅನಾರೋಗ್ಯಕ್ಕೆ ತುತ್ತಾಗುವುದು ತುಂಬಾ ಅಪರೂಪವಾಗಿತ್ತು. ವೈದ್ಯರಿಗೂ ಕೂಡ ಹೆಚ್ಚಿನ ಕೆಲಸ ಇರಲಿಲ್ಲ.
ಆದರೆ, ಕಾಲ ಬದಲಾದಂತೆ ಜನರ ಆಹಾರ ಶೈಲಿಯಲ್ಲೂ ತುಂಬಾ ಬದಲಾವಣೆ ಆಗಿದೆ. ಇಂದು ಜನರು ಪಿಜ್ಜಾ, ಬರ್ಗರ್ ಮತ್ತು ಫಾಸ್ಟ್ ಫುಡ್‌ನಂತಹ ಆಹಾರಗಳಿಗೆ ಒಗ್ಗಿಕೊಂಡು ತಮ್ಮ ಆರೋಗ್ಯವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ಈ ಆಹಾರಗಳು ಬಾಯಿಗೆ ರುಚಿ ನೀಡಬಹುದಷ್ಟೇ ಆದರೆ, ಆರೋಗ್ಯಕ್ಕೆ ಮಾರಕ ಎಂಬುದನ್ನು ಯಾವುದೇ ಕಾರಣಕ್ಕೂ ಮರೆಯಬಾರದು. ಹೀಗಾಗಿ ಹಳೆಯ ಕಾಲದಂತೆ ಜೋಳದ ರೊಟ್ಟಿಗಳನ್ನು ಸೇವಿಸಿದರೆ ಸಂಪೂರ್ಣ ಆರೋಗ್ಯವನ್ನು ಪಡೆಯಬಹುದು ಎಂದು ಆರೋಗ್ಯ ತಜ್ಞರು ಹೇಳುತ್ತಾರೆ.
ಅಂದಹಾಗೆ ಜೋಳವು ಸಾಕಷ್ಟು ಪೋಷಕಾಂಶಗಳಿಂದ ಕೂಡಿದೆ. ಜೋಳದ ರೊಟ್ಟಿ ಹಾಗೂ ಜೋಳದ ಹಿಟ್ಟಿನಿಂದ ಮಾಡಿದ ಯಾವುದೇ ಖಾದ್ಯಗಳು ಸುಲಭವಾಗಿ ಜೀರ್ಣವಾಗುತ್ತವೆ. ಇದರಿಂದ ತೂಕ ಹೆಚ್ಚಾಗುವುದನ್ನು ತಡೆಯಲು ಸಹಾಯ ಮಾಡುತ್ತದೆ.
ಇನ್ನು ಜೋಳದಲ್ಲಿ ಫೈಬರ್ ಅಂಶ ಹೆಚ್ಚಾಗಿದೆ. ಸರಾಸರಿ ಒಂದು ಜೋಳದ ರೊಟ್ಟಿ 1.4 ಗ್ರಾಂ ಫೈಬರ್ ಅನ್ನು ಹೊಂದಿರುತ್ತದೆ. ಜೀರ್ಣಕ್ರಿಯೆಯನ್ನು ಸುಧಾರಿಸಲು ಫೈಬರ್ ತುಂಬಾ ಉಪಯುಕ್ತವಾಗಿದೆ. ಫೈಬರ್ ಮಾತ್ರವಲ್ಲದೆ, ಜೋಳವು ಕಬ್ಬಿಣದ ಅಂಶದಲ್ಲೂ ಸಮೃದ್ಧವಾಗಿದೆ. ರಕ್ತಹೀನತೆಯಿಂದ ಬಳಲುತ್ತಿರುವವರಿಗೆ ಇದು ತುಂಬಾ ಒಳ್ಳೆಯದು. ಜೋಳದ ರೊಟ್ಟಿಗಳನ್ನು ನಿಯಮಿತ ಸೇವನೆ ಮಾಡಿದರೆ, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇದರಲ್ಲಿರುವ ನಿಯಾಸಿನ್, ಥಯಾಮಿನ್ ಮತ್ತು ರೈಬೋಫ್ಲಾವಿನ್‌ನಂತಹ ಬಿ-ಕಾಂಪ್ಲೆಕ್ಸ್ ವಿಟಮಿನ್‌ಗಳು ಶಕ್ತಿಯನ್ನು ಹೆಚ್ಚಿಸುತ್ತವೆ.
ಜೋಳವು ಕಡಿಮೆ ಗ್ಲೈಸೆಮಿಕ್ ಸೂಚಿಯನ್ನು ಹೊಂದಿದೆ. ಇದು ಸಕ್ಕರೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಜೋಳದ ಹಿಟ್ಟಿನಿಂದ ತಯಾರಿಸಿದ ಉತ್ಪನ್ನಗಳನ್ನು ನಿಯಮಿತವಾಗಿ ಸೇವಿಸುವುದು ಹೃದಯದ ಆರೋಗ್ಯಕ್ಕೆ ಒಳ್ಳೆಯದು ಎಂದು ತಜ್ಞರು ಹೇಳುತ್ತಾರೆ. ಜೋಳದಲ್ಲಿರುವ ಉತ್ಕರ್ಷಣ ನಿರೋಧಕಗಳು ಮತ್ತು ಫೈಟೊಕೆಮಿಕಲ್‌ಗಳು ದೇಹದಲ್ಲಿ ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಜೋಳದಲ್ಲಿ ಪ್ರೋಟೀನ್ ಅಧಿಕವಾಗಿದೆ. ಕಬ್ಬಿಣ, ಮೆಗ್ನೀಸಿಯಂ, ತಾಮ್ರ, ಕ್ಯಾಲ್ಸಿಯಂ, ಸತು ಮತ್ತು ವಿಟಮಿನ್ ಬಿ 3 ಇರುವಿಕೆಯು ಮೂಳೆಗಳನ್ನು ಬಲಪಡಿಸುತ್ತದೆ ಮತ್ತು ಸ್ನಾಯು ಬೆಳವಣಿಗೆಗೆ ಸಹಕಾರಿಯಾಗಿದೆ. ಜೋಳವನ್ನು ಪ್ರತಿದಿನ ತಿನ್ನುವುದರಿಂದ ಅಜೀರ್ಣ, ಗ್ಯಾಸ್, ಆಮ್ಲೀಯತೆ ಮತ್ತು ಮಲಬದ್ಧತೆಯಂತಹ ಸಮಸ್ಯೆಗಳನ್ನು ಸುಲಭವಾಗಿ ನಿವಾರಿಸಬಹುದು. ಹೀಗಾಗಿ ನಿಮ್ಮ ಆಹಾರ ಪಟ್ಟಿಯಲ್ಲಿ ಜೋಳದ ರೊಟ್ಟಿಯನ್ನು ತಪ್ಪದೇ ಸೇರಿಸಿ, ಇದು ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು.
ಹಕ್ಕು ನಿರಾಕರಣೆ: ಲೇಖನದಲ್ಲಿ ಉಲ್ಲೇಖಿಸಲಾದ ಸಲಹೆಗಳು ಸಾಮಾನ್ಯ ಮಾಹಿತಿಗಾಗಿ ಮಾತ್ರ. ನೀವು ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ ಯಾವಾಗಲೂ ನಿಮ್ಮ ವೈದ್ಯರನ್ನು ಸಂಪರ್ಕಿಸಿ.