ಅಮೇಜಾನ್‌ನಲ್ಲಿ ಪ್ರೀಮಿಯರ್ ಆಗ್ತಿದೆ ಪುನೀತ್ ನಿರ್ಮಾಣದ ಚಿತ್ರ

French Biryani Final
Published on

ಅಮಿತಾಭ್ ಬಚ್ಚನ್ ಮತ್ತು ಆಯುಷ್ಮಾನ್ ಖುರಾನ ಅಭಿನಯದ ‘ಗುಲಾಬೋ ಸಿತಾಬೋ’ ಚಿತ್ರವು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುವುದಕ್ಕಿಂತ ಮುನ್ನ ಅಮೇಜಾನ್ ಪ್ರೈಮ್‌ನಲ್ಲಿ ಬಿಡುಗಡೆಯಾಗುತ್ತಿರುವ ವಿಷಯ ಗೊತ್ತೇ ಇದೆ. ಈಗ ಪುನೀತ್ ನಿರ್ಮಾಣದ ‘ಫ್ರೆಂಚ್​ ಬಿರಿಯಾನಿ’ ಎಂಬ ಕನ್ನಡ ಚಿತ್ರ ಸಹ ಅಮೇಜಾನ್‌ನಲ್ಲಿ ಜುಲೈ 24ರಂದು ಬಿಡುಗಡೆಯಾಗಲಿದೆ.

ಈ ತರಹದ್ದೊಂದು ಸುದ್ದಿ ಕಳೆದ ಕೆಲವು ದಿನಗಳಿಂದ ಕೇಳಿ ಬರುತ್ತಲೇ ಇತ್ತು. ಈಗ ಸ್ವತಃ ಪುನೀತ್, ಈ ಸುದ್ದಿಯನ್ನು ಕನ್ಫರ್ಮ್ ಮಾಡಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅವರು, ‘ಒಂದು ಸ್ವಾಧಿಷ್ಟಕರ ಕಥೆಯನ್ನು ರೆಡಿ ಮಾಡಿದ್ದೇವೆ. ಜುಲೈ 24ರಂದು ಅಮೇಜಾನ್ ಪ್ರೈಮ್‌ನಲ್ಲಿ ಸವಿಯುವುದಕ್ಕೆ ರೆಡಿಯಾಗಿದೆ’ ಎಂದು ಬರೆದುಕೊಂಡಿದ್ದಾರೆ.

ಪುನೀತ್, ಪಿಆರ್‌ಕೆ ಪ್ರೊಡಕ್ಷನ್ಸ್ ಎಂಬ ನಿರ್ಮಾಣ ಸಂಸ್ಥೆ ಹುಟ್ಟುಹಾಕಿ ಎರಡು ವರ್ಷಗಳಾಗಿವೆ. ಸಂಸ್ಥೆಯ ಮೊದಲ ಚಿತ್ರವಾಗಿ ಕಳೆದ ವರ್ಷ ‘ಕವಲು ದಾರಿ’ ಬಿಡುಗಡೆಯಾಗಿತ್ತು. ಆ ನಂತರ ‘ಮಾಯಾ ಬಜಾರ್’ ಎಂಬ ಇನ್ನೊಂದು ಚಿತ್ರವನ್ನೂ ಪುನೀತ್ ನಿರ್ಮಿಸಿದ್ದರು. ಈ ಎರಡೂ ಚಿತ್ರಗಳು ಅಮೇಜಾನ್ ಪ್ರೈಮ್‌ನಲ್ಲಿ ಲಭ್ಯವಿದೆ. ಆ ಎರಡೂ ಚಿತ್ರಗಳು ಮೊದಲಿಗೆ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿ, ಆ ನಂತರ ಅಮೇಜಾನ್ ಪ್ರೈಮ್‌ಗೆ ಬಂದಿತ್ತು. ಆದರೆ, ‘ಫ್ರೆಂಚ್​ ಬಿರಿಯಾನಿ’ ಚಿತ್ರವನ್ನು ಚಿತ್ರಮಂದಿರಕ್ಕಿಂತ ಮುಂಚಿತವಾಗಿ ಅಮೇಜಾನ್ ಪ್ರೈಮ್‌ನಲ್ಲಿ ಬಿಡುಗಡೆ ಮಾಡಲಾಗುತ್ತಿರುವುದು ವಿಶೇಷ.

‘ಫ್ರೆಂಚ್​ ಬಿರಿಯಾನಿ’ ಚಿತ್ರವನ್ನು ಹಿರಿಯ ನಿರ್ದೇಶಕ ಟಿ.ಎಸ್. ನಾಗಾಭರಣ ಅವರ ಮಗ ಪನ್ನಗಾಭರಣ ನಿರ್ದೇಶನ ಮಾಡಿದ್ದಾರೆ. ಈ ಹಿಂದೆ ‘ಹ್ಯಾಪಿ ನ್ಯೂ ಇಯರ್’ ಎಂಬ ಚಿತ್ರ ನಿರ್ದೇಶಿಸಿದ್ದ ಅವರು, ಇದೀಗ ‘್ರೆಂಚ್ ಬಿರಿಯಾನಿ’ ಮೂಲಕ ವಾಪಸ್ಸಾಗಿದ್ದಾರೆ. ಈ ಹಿಂದೆ ‘ಹಂಬಲ್ ಪೊಲಿಟೀಶಿಯನ್ ನೊಗರಾಜ್’ನಲ್ಲಿ ಪ್ರಮುಖ ಪಾತ್ರ ಮಾಡಿ ಎಲ್ಲರನ್ನೂ ನಗಿಸಿದ್ದ ಡ್ಯಾನಿಶ್ ಸೇಠ್, ಈ ಚಿತ್ರದ ಹೀರೋ. ಡ್ಯಾನಿಶ್ ಜತೆಗೆ, ಸಾಲ್ ಯೂಸಫ್​, ರಂಗಾಯಣ ರಘು, ದಿಶಾ ಮದನ್ ಮುಂತಾದವರು ನಟಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net