

ಬೆಂಗಳೂರು: 'ಲವ್ ಬಡ್ಸ್ರ್' ಚಿತ್ರದಲ್ಲಿ ಮಿಲನಾ ನಾಗರಾಜ್ ನಾಯಕಿಯರಾಗಿ ನಟಿಸುತ್ತಿರುವುದು ಹೊಸ ವಿಷಯವೇನಲ್ಲ. ಆದರೆ, ಅವರ ಪಾತ್ರವೇನು ಮತ್ತು ಚಿತ್ರದಲ್ಲಿ ಅವರು ಹೇಗೆ ಕಾಣುತ್ತಾರೆ ಎಂಬ ವಿಷಯ ರಹಸ್ಯವಾಗಿಟ್ಟಿದ್ದರು ನಿರ್ದೇಶಕ ಪಿ.ಸಿ. ಶೇಖರ್.
ಈಕ ಕೊನೆಗೂ ಅವರು ಚಿತ್ರದ ಮಿಲನಾ ಅವರ ಫಸ್ಟ್ ಲುಕ್ ಬಹಿರಂಗಗೊಳಿಸಿದ್ದಾರೆ. ಅಷ್ಟೇ ಅಲ್ಲ, ಚಿತ್ರದಲ್ಲಿ ಅವರ ಪಾತ್ರವೇನು ಎಂಬುದನ್ನು ಸಹ ಬಹಿರಂಗಗೊಳಿಸಿದ್ದಾರೆ. ಈ ಕುರಿತು ಮಾತನಾಡುವ ಅವರು, 'ಮಿಲನಾ ಇಲ್ಲಿ ಸ್ವತಂತ್ರ ಮಹಿಳೆಯಾಗಿ ಕಾಣಿಸಿಕೊಂಡಿದ್ದಾರೆ. ಹಲವು ಗುರಿಗಳಿರುವ ಪಾತ್ರ. ಯಾರಿಗೂ ಕೇರ್ ಮಾಡದ ಡೋಂಟ್ ಕೇರ್ ಪಾತ್ರ ಅವರದ್ದು. ಬೊಟೀಕ್ ನಡೆಸುತ್ತಿರುತ್ತಾರೆ. ಫ್ಯಾಶನ್ ಡಿಸೈನರ್ ಆಗಿರುತ್ತಾರೆ. ಬಹಳ ಕ್ಲಾಸ್ ಆಗಿ ಇಡೀ ಚಿತ್ರ ರೂಪುಗೊಂಡಿದೆ. ಎಲ್ಲ ಗಂಡ-ಹೆಂಡತಿಯರಿಗೂ ಕನೆಕ್ಟ್ ಆಗುವ ಚಿತ್ರ ಇದು' ಎನ್ನುತ್ತಾರೆ.
ಇದು ಆಧುನಿಕ ಗಂಡ-ಹೆಂಡತಿಯ ಕಥೆಯಂತೆ. 'ಈಗಿನ ಕಾಲದ ಗಂಡ-ಹೆಂಡತಿ ಸಾಮಾಜಿಕವಾಗಿ, ಆರ್ಥಿಕವಾಗಿ ಏನೆಲ್ಲ ಸಮಸ್ಯೆಗಳನ್ನು ಎದುರಿಸುತ್ತಾರೆ? ಅವರ ನೋವೇನು? ಅವರ ನಡುವಿನ ಬಂಧ ಹೇಗಿರುತ್ತದೆ? ಮುಂತಾದ ಹಲವು ವಿಷಯಗಳನ್ನು ಈ ಚಿತ್ರದಲ್ಲಿ ಹೇಳುವುದಕ್ಕೆ ಹೊರಟಿದ್ದೇವೆ. ಇದೊಂದು ಸುಂದರವಾದ ಪ್ರೇಮಕಥೆ' ಎನ್ನುತ್ತಾರೆ ಶೇಖರ್.
ಈ ಚಿತ್ರದಲ್ಲಿ ನಾಯಕನಾಗಿ 'ಡಾರ್ಲಿಂಗ್' ಕೃಷ್ಣ ನಟಿಸುತ್ತಿದ್ದು, ಮತ್ತೊಂದು ಪಾತ್ರದಲ್ಲಿ ಸಂಯುಕ್ತ ಹೊರನಾಡು ಇದ್ದಾರೆ. ಜತೆಗೆ ರಂಗಾಯಣ ರಘು, ಸಾಧು ಕೋಕಿಲ, ಅವಿನಾಶ್, ವೀಣಾ ಸುಂದರ್ ಮುಂತಾದ ಜನಪ್ರಿಯ ಕಲಾವಿದರು ನಟಿಸುತ್ತಿದ್ದಾರೆ. ಚಿತ್ರದಲ್ಲಿ ಏಳು ಹಾಡುಗಳಿದ್ದು, ಅರ್ಜುನ್ ಜನ್ಯ ಸಂಗೀತ ಸಂಯೋಜಿಸುತ್ತಿದ್ದಾರೆ. ಶಕ್ತಿ ಶೇಖರ್ ಛಾಯಾಗ್ರಹಣವಿದೆ. 'ಕಡ್ಡಿಪುಡಿ' ಚಂದ್ರು ನಿರ್ಮಿಸುತ್ತಿರುವ ಈ ಚಿತ್ರದ ಚಿತ್ರೀಕರಣ ಬಹುತೇಕ ಮುಕ್ತಾಯಗೊಂಡಿದ್ದು, ಸದ್ಯದಲ್ಲೇ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಪ್ರಾರಂಭವಾಗಲಿವೆ.