

ಮುಂಬೈ: ಬಾಲಿವುಡ್ನ ಖ್ಯಾತ ನಿರ್ದೇಶಕ ಅನುರಾಗ್ ಕಶ್ಯಪ್ ವಿರುದ್ಧ ಮಂಗಳವಾರ ರಾತ್ರಿ ದೂರು ದಾಖಲಾಗಿದೆ. ಇಲ್ಲಿನ ವರ್ಸೋವಾ ಪೊಲೀಸ್ ಠಾಣೆಯಲ್ಲಿ ನಟಿಯೊಬ್ಬರು ಅತ್ಯಾಚಾರ ಆರೋಪದಡಿ ಅನುರಾಗ್ ವಿರುದ್ಧ ದೂರು ನೀಡಿದ್ದಾರೆ.
2013ರಲ್ಲಿ ಅತ್ಯಾಚಾರ ಮತ್ತು ಕಿರುಕುಳ ನೀಡಿದ್ದರು ಎಂದು ನಟಿಯೊಬ್ಬರು ಅನುರಾಗ್ ವಿರುದ್ಧ ಆರೋಪ ಮಾಡಿದ್ದರು. ಆ ಆರೋಪ ಶುದ್ಧ ಸುಳ್ಳು ಮತ್ತು ಬೇಸ್ಲೆಸ್ ಎಂದು ಅನುರಾಗ್ ಹೇಳಿಕೊಂಡಿದ್ದರು. ಮಂಗಳವಾರ ವಕೀಲರ ಸಮೇತ ವರ್ಸೋವಾ ಠಾಣೆಗೆ ಆಗಮಿಸಿ ದೂರು ನೀಡಿದ್ದಾರೆ.
ದೂರಿನನ್ವಯ ಅನುರಾಗ್ ವಿರುದ್ಧ ಕಲಂ 376, 354, 341, 342 ಅಡಿಯಲ್ಲಿ ದೂರು ದಾಖಲು ಮಾಡಿಕೊಳ್ಳಲಾಗಿದೆ. ಸದ್ಯ 2013ರ ಘಟನೆ ಬಗ್ಗೆ ಮಾಹಿತಿ ಕಲೆ ಹಾಕುವ ಪ್ರಕ್ರಿಯೆ ಶುರುವಾಗಿದ್ದು, ಶೀಘ್ರದಲ್ಲಿ ವಿಚಾರಣೆಗೆ ಅನುರಾಗ್ ಅವರನ್ನು ಪೊಲೀಸ್ ಇಲಾಖೆ ಆಹ್ವಾನಿಸಲಿದೆ.
ಈ ಮೊದಲು ಓಶಿವಾರಾ ಪೊಲೀಸ್ ಠಾಣೆಗೆ ದೂರು ನೀಡಲು ನಟಿ ತೆರಳಿದ್ದರು. ಅತ್ಯಾಚಾರ ಆಗಿತ್ತು ಎನ್ನಲಾದ ಸ್ಥಳದ ವ್ಯಾಪ್ತಿಗೆ ಬರಲಿರುವ ಠಾಣೆಗೆ ದೂರು ನೀಡಿ ಎಂದು ಪೊಲೀಸ್ ಇಲಾಖೆ ತಿಳಿಸಿತ್ತು. ಅದರಂತೆ ಇದೀಗ ವರ್ಸೋವಾ ಠಾಣೆಯಲ್ಲಿ ದೂರು ದಾಖಲಾಗಿದೆ. (ಏಜೆನ್ಸೀಸ್)