ದುಬೈ ಸಿನಿಮಾ ಅಭಿಮಾನಿಗಳಿಗೆ ಗುಡ್​ ನ್ಯೂಸ್​

Good Newz - Final
Published on

ಜಗತ್ತಿನಾದ್ಯಂತ ಕರೊನಾ ಭಯದಿಂದ ಎಲ್ಲಾ ದೇಶಗಳಲ್ಲೂ ಚಿತ್ರಮಂದಿರಗಳನ್ನು ಬಂದ್​ ಮಾಡಲಾಗಿತ್ತು. ಈಗ ಒಂದೊಂದೇ ದೇಶದಲ್ಲಿ ಕರೊನಾ ಪ್ರಕರಣಗಳು ಕಡಿಮೆಯಾಗುತ್ತಿದ್ದಂತೆಯೇ, ಚಿತ್ರಮಂದಿರಗಳನ್ನು ಪ್ರಾರಂಭಿಸಲಾಗುತ್ತಿದೆ. ಈಗಾಗಲೇ ಕೆಲವು ದೇಶಗಳಲ್ಲಿ ಚಿತ್ರ ಪ್ರದರ್ಶನ ಶುರುವಾಗಿದ್ದರೆ, ಇನ್ನು ಕೆಲವು ದೇಶಗಳಲ್ಲಿ ಮುಂದಿನ ಒಂದೆರೆಡು ದೇಶಗಳಲ್ಲಿ ಚಿತ್ರ ಪ್ರದರ್ಶನ ಶುರುವಾಗಲಿದೆ.

ದುಬೈನಲ್ಲೂ ಅಷ್ಟೇ. ಕಳೆದ ಮೂರು ತಿಂಗಳಿನಿಂದ ದುಬೈನಲ್ಲಿ ಮಲ್ಟಿಪ್ಲೆಕ್ಸ್​ಗಳೆಲ್ಲಾ ಬಂದ್​ ಆಗಿ, ಚಿತ್ರ ಪ್ರದರ್ಶನ ರದ್ದಾಗಿತ್ತು. ಇದೀಗ ಮೂರು ತಿಂಗಳ ಬಳಿಕ ಕೊನೆಗೂ ದುಬೈನಲ್ಲಿ ಚಿತ್ರ ಪ್ರದರ್ಶನ ಶುರುವಾಗಲಿದೆಯಂತೆ. ಜೂನ್​ 11ರಿಂದ ದುಬೈನಲ್ಲಿ ಚಿತ್ರ ಪ್ರದರ್ಶನ ಶುರು ಮಾಡುವ ನಿರ್ಧಾರ ಮಾಡಲಾಗಿದ್ದು, ಅಭಿಮಾನಿಗಳು ಈ ಗುಡ್​ ನ್ಯೂಸ್​ ಕೇಳಿ ಖುಷಿಯಾಗಿದ್ದಾರೆ.

ಇನ್ನು ಅಕ್ಷಯ್​ ಕುಮಾರ್​ ಅಭಿನಯದ ಗುಡ್​ ನ್ಯೂಸ್​ ಚಿತ್ರವು ಲಾಕ್​ಡೌನ್​ ನಂತರ ಬಿಡುಗಡೆಯಾಗಲಿರುವ ಮೊದಲ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಕಳೆದ ವರ್ಷ ಬಿಡುಗಡೆಯಾಗಿದ್ದ ಅಕ್ಷಯ್​ ಕುಮಾರ್, ಕರೀನಾ ಕಪೂರ್​, ಕಿಯಾರಾ ಅಡ್ವಾನಿ ಮತ್ತು ದಿಲ್ತಿಜ್​ ದೊಸಾಂಜ್​ ಅಭಿನಯದ ಗುಡ್​ ನ್ಯೂಸ್​ ಯಶಸ್ವಿಯಾಗಿ, ಬಹಳ ಕಡಿಮೆ ಸಮಯದಲ್ಲಿ 100 ಕೋಟಿ ಕ್ಲಬ್​ ಸೇರಿತ್ತು. ಆ ನಂತರ ಚಿತ್ರ ಅಮೇಜಾನ್​ ಪ್ರೈಮ್​ನಲ್ಲಿ ಬಿಡುಗಡೆಯಾಗಿ ಮೆಚ್ಚುಗೆ ಪಡೆದಿತ್ತು. ಈಗ ಅದೇ ಚಿತ್ರ, ಮತ್ತೊಮ್ಮೆ ಬಿಡುಗಡೆಯಾಗುತ್ತಿದೆ.

ತಮ್ಮ ಚಿತ್ರ ಬಿಡುಗಡೆಯಾಗುತ್ತಿರುವ ಬಗ್ಗೆ ಅಕ್ಷಯ್​ ಕುಮಾರ್​ ಸಹ ಫುಲ್​ ಖುಷಿಯಾಗಿದ್ದಾರೆ. ದುಬೈ ಜನ ಯಾವತ್ತೂ ನನ್ನ ಚಿತ್ರಗಳಿಗೆ ಪ್ರೀತಿ ತೋರಿಸುತ್ತಲೇ ಬಂದಿದ್ದು, ನನ್ನ ಹಲವು ಚಿತ್ರಗಳು ಅಲ್ಲಿ ಯಶಸ್ವಿಯಾಗಿವೆ. ಇಂಥ ಸಮಯದಲ್ಲಿ ನನ್ನ ಚಿತ್ರವೊಂದು, ದುಬೈ ಜನರ ಮುಖದಲ್ಲಿ ನಗು ತರಿಸಬಹುದು, ಅವರನ್ನು ಮನರಂಜಿಸಬಹುದು ಎಂದು ಕೇಳಿ ಬಹಳ ಖುಷಿಯಾಗಿದೆ ಎಂದು ಅಕ್ಷಯ್​ ಹೇಳಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net