ರಾಕೇಶ್ ಶರ್ಮಾ ಬಯೋಪಿಕ್​ ಗೆ ಫರ್ಹಾನ್​ ಅಖ್ತರ್​ ಆಯ್ಕೆ

Rakesh Sharma - Farhan Akhtar
Published on

ಭಾರತದ ಗಗನಯಾತ್ರಿ ರಾಕೇಶ್​ ಶರ್ಮಾ ಅವರ ಕುರಿತಾದ ಬಯೋಪಿಕ್​ ಮಾಡುವ ಬಗ್ಗೆ ಚರ್ಚೆ ಶುರುವಾಗಿದ್ದು ಸುಮಾರು ಎರಡು ವರ್ಷಗಳ ಹಿಂದೆ. ಚಿತ್ರಕ್ಕೆ 'ಸಾರೇ ಜಹಾನ್​ ಸೇ ಅಚ್ಛಾ' ಎಂಬ ನಾಮಕರಣವನ್ನೂ ಮಾಡಲಾಯಿತು.

ಚಿತ್ರದ ನಾಮಕರಣವಾದರೂ, ಚಿತ್ರ ಪ್ರಾರಂಭವಾಗಲಿಲ್ಲ. ಏಕೆಂದರೆ, ರಾಕೇಶ್​ ಶರ್ಮಾ ಅವರ ಪಾತ್ರವನ್ನು ಯಾರು ಮಾಡುತ್ತಾರೆ ಎಂಬ ವಿಷಯವೇ ಇದುವರೆಗೂ ಪಕ್ಕಾ ಆಗಿರಲಿಲ್ಲ. ಮೊದಲು ಅಮೀರ್​ ಖಾನ್​ ಅವರ ಹೆಸರು ಕೇಳಿ ಬಂತು. ನಂತರ ಶಾರೂಖ್​ ಖಾನ್​ ಎಂದಾಯಿತು. ವಿಕ್ಕಿ ಕೌಶಾಲ್​ ಆದರೆ ಹೇಗೆ ಎಂಬ ಪ್ರಸ್ತಾವನೆಯೂ ಇತ್ತು. ಆದರೆ, ಈ ಮೂವರಲ್ಲಿ ಯಾರೂ ಆಯ್ಕೆ ಆಗಲಿಲ್ಲ.

ಇದೀ ಆ ಪಾತ್ರಕ್ಕೆ ನಟ-ನಿರ್ದೇಶಕ ಫರ್ಹಾನ್​ ಆಖ್ತರ್​ ಆಯ್ಕೆಯಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಫರ್ಹಾನ್​ ಈ ಹಿಂದೆ, ಮಿಲ್ಕಾ ಸಿಂಗ್​ ಅವರ ಬಯೋಪಿಕ್​ನಲ್ಲಿ ಮಿಲ್ಕಾ ಸಿಂಗ್​ ಆಗಿ ಕಾಣಿಸಿಕೊಂಡಿದ್ದರು. ಅವರಿಂದಲೇ ಈ ಪಾತ್ರ ಮಾಡಿಸಿದರೆ ಹೇಗೆ ಎಂಬ ಯೋಚನೆ ಚಿತ್ರತಂಡಕ್ಕೆ ಇತ್ತೀಚೆಗೆ ಬಂದಿದೆ.

ಹೇಗೂ, ಫರ್ಹಾನ್​ ಸ್ವಲ್ಪ ನೋಡುವುದಕ್ಕೂ ರಾಕೇಶ್​ ಶರ್ಮಾ ಅವರಂತೆಯೇ ಕಾಣುತ್ತಾರೆ. ಮೇಲಾಗಿ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಾರೆ. ಹಾಗಾಗಿ ಅವರಿಂದಲೇ ಏಕೆ ಪಾತ್ರ ಮಾಡಿಸಬಾರದು ಎಂದು ನಿರ್ದೇಶಕ ಮಹೇಶ್​ ಮಥಾಯ್​ ಎಂದು ಫರ್ಹಾನ್​ ಅವರನ್ನು ಭೇಟಿ ಮಾಡಿ ಕಥೆ ಹೇಳಿದರಂತೆ. ಕಥೆ ಕೇಳಿ ಮೆಚ್ಚಿಕೊಂಡಿರುವ ಫರ್ಹಾನ್​ ಅಖ್ತರ್​, ಪಾತ್ರ ಮಾಡುವುದಕ್ಕೆ ಮುಂದಾಗಿದ್ದಾರೆ ಎಂದು ಹೇಳಲಾಗುತ್ತಿದೆ.

ಹಾಗಂತ ಚಿತ್ರ ಈಗಲೇ ಶುರುವಾಗಿಬಿಡುತ್ತದೆ ಎಂದಲ್ಲ. ಫರ್ಹಾನ್​ ಮೊದಲು ತಮ್ಮ ಹಳೆಯ ಚಿತ್ರಗಳನ್ನೆಲ್ಲಾ ಮುಗಿಸಬೇಕು. ಮೇಲಾಗಿ ರಾಕೇಶ್​ ಶರ್ನಾ ಅವರ ಪಾತ್ರ ಮಾಡುವುದಕ್ಕೆ ಒಂದಿಷ್ಟು ತಯಾರಿಗಳನ್ನೂ ಮಾಡಿಕೊಳ್ಳಬೇಕು. ಆ ನಂತರವಷ್ಟೇ ಈ ಚಿತ್ರ ಶುರುವಾಗಲಿದೆ.

ಸದ್ಯಕ್ಕೆ ಚಿತ್ರದ ಕಥೆ-ಚಿತ್ರಕಥೆ ಕೆಲಸಗಳು ಮುಗಿದಿವೆಯಂತೆ. ಅಷ್ಟೇ ಅಲ್ಲ, ನಾಯಕನ ಆಯ್ಕೆಯೂ ಆಗಿದೆ. ಚಿತ್ರತಂಡದವರು ಸದ್ಯಕ್ಕೆ ಪ್ರೀ-ಪ್ರೊಡಕ್ಷನ್​ ಕೆಲಸಗಳು ಶುರು ಮಾಡಿಕೊಂಡು, ಮುಂದಿನ ವರ್ಷ ಚಿತ್ರ ಪ್ರಾರಂಭಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net