ಚಂದನವನದ ಸಭೆಗೆ ಜಗ್ಗೇಶ್​ ಯಾಕೆ ಹೋಗಲಿಲ್ಲ? ಇಲ್ಲಿದೆ ಕಾರಣ ...

Jaggesh Final
Published on

ಶಿವರಾಜಕುಮಾರ್​ ಅವರ ಮನೆಯಲ್ಲಿ ಬುಧವಾರವಷ್ಟೇ ಕನ್ನಡ ಚಿತ್ರರಂಗದ ಟಾಪ್​ ನಟರೆಲ್ಲಾ ಸೇರಿ ಸಭೆ ಮಾಡಿದ್ದಾರೆ. ಕಿರುತೆರೆ ಮತ್ತು ಚಿತ್ರರಂಗವನ್ನು ಅವಲಂಬಿಸಿರುವ ಕಾರ್ಮಿಕರಿಗೆ ಪ್ಯಾಕೇಜ್, ಚಿತ್ರಮಂದಿರ ಪ್ರಾರಂಭ, ದರ ನಿಗದಿ, ತೆರಿಗೆ ವಿನಾಯಿತಿ, ಚಿತ್ರರಂಗದ ಪುನಶ್ಚೇತನ ಮುಂತಾದ ಹಲವು ವಿಷಯಗಳ ಕುರಿತಾಗಿ ಚರ್ಚೆ ನಡೆಸಲಾಗಿದೆ.

ಈ ಸಭೆಯಲ್ಲಿ ಶಿವರಾಜಕುಮಾರ್​, ರವಿಚಂದ್ರನ್​, ಉಪೇಂದ್ರ, ರಮೇಶ್​ ಅರವಿಂದ್​, ಪುನೀತ್​ ರಾಜಕುಮಾರ್​, ಶ್ರೀಮುರಳಿ, ಯಶ್​, ಗಣೇಶ್​, 'ದುನಿಯಾ' ವಿಜಯ್​, ನಿರ್ಮಾಪಕರಾದ ಕೆ.ಪಿ. ಶ್ರೀಕಾಂತ್​, ಜಯಣ್ಣ, ಪುಷ್ಕರ್​ ಮಲ್ಲಿಕಾರ್ಜುನಯ್ಯ ಸೇರಿದಂತೆ ಹಲವರು ಭಾಗವಹಿಸಿದ್ದಾರೆ.

ಚಂದನವನದ ದೊಡ್ಡ ಬಹುತೇಕ ಪ್ರಮುಖ ಕಲಾವಿದರು ಈ ಸಭೆಯಲ್ಲಿ ಭಾಗವಹಿಸಿದರೂ ಸುದೀಪ್​, ದರ್ಶನ್​, ಜಗ್ಗೇಶ್​ ಮತ್ತು ಧ್ರುವ ಸರ್ಜಾ ಅವರ ಅನುಪಸ್ಥಿತಿ ಎದ್ದು ಕಾಣುತಿತ್ತು. ಈ ಪೈಕಿ ಸುದೀಪ್​, ಹೈದರಾಬಾದ್​ನಲ್ಲಿ 'ಫ್ಯಾಂಟಮ್​' ಚಿತ್ರದ ಚಿತ್ರೀಕರಣದಲ್ಲಿ ಭಾಗವಹಿಸುತ್ತಿರುವುದರಿಂದ ಅವರು ಬರಲು ಸಾಧ್ಯವಾಗಿಲ್ಲ. ದರ್ಶನ್​ ಮೈಸೂರಿನಲ್ಲಿ ಕಳೆದ ನಾಲ್ಕು ತಿಂಗಳಿನಿಂದ ಇರುವುದರಿಂದ ಅವರು ಬರುವುದಕ್ಕೆ ಆಗಿಲ್ಲ.

ಇನ್ನು ಧ್ರುವ ಮತ್ತು ಜಗ್ಗೇಶ್​ ಅವರು ಬೆಂಗಳೂರಿನಲ್ಲೇ ಇದ್ದರು. ಧ್ರುವ ಇತ್ತೀಚೆಗಷ್ಟೇ ಕರೊನಾದಿಂದ ಚೇತರಿಸಿಕೊಳ್ಳುತ್ತಿರುವುದರಿಂದ ಅವರು ಸಹಜವಾಗಿಯೇ ಬರಲಿಲ್ಲ ಎಂದು ಹೇಳಲಾಗುತ್ತಿದೆ. ಈ ಮಧ್ಯೆ, ಜಗ್ಗೇಶ್​ ಅವರು ಯಾಕೆ ಸಭೆಯಲ್ಲಿ ಇರಲಿಲ್ಲ ಎಂಬ ಕುತೂಹಲ ಎಲ್ಲರನ್ನೂ ಕಾಡಿತ್ತು. ಈ ಕುತೂಹಲಕ್ಕೆ ಜಗ್ಗೇಶ್​ ಅವರೇ ಉತ್ತರ ಕೊಟ್ಟಿದ್ದಾರೆ.

ಈ ಕುರಿತು ಟ್ವೀಟ್​ ಮಾಡಿರುವ ಅವರು, 'ಯಾವುದೆ ಕಾರಣಕ್ಕು ಕೊರೋನ ಔಷದ ಬರುವವರೆಗು ಎಲ್ಲಿಯು ಹೋಗುವುದಿಲ್ಲಾ. ಯಾರ ಬೇಟಿಯು ಮಾಡುವುದಿಲ್ಲಾ. ಶಿವಣ್ಣ, ಪಾಪ ಕರೆದರು ನಾನೆ ಬರುವುದಿಲ್ಲಾ ಎಂದು ತಿಳಿಸಿದೆ. ನನ್ನ ಸಂಪೂರ್ಣ ಬೆಂಬಲ ನಮ್ಮ ಉದ್ಯಮಕ್ಕಿದೆ. ಎಲ್ಲಾ ಕಾರ್ಯಕ್ಕೆ ವೈಯಕ್ತಿಕವಾಗಿ ಹೋಗದಿದ್ದರೂ Online ಚರ್ಚೆ ನಡೆಯುತ್ತಿದೆ' ಎಂದು ಜಗ್ಗೇಶ್​ ತಮ್ಮ ಟ್ವೀಟ್​ನಲ್ಲಿ ತಿಳಿಸಿದ್ದಾರೆ. ಈ ಮೂಲಕ ತಾವೇಕೆ ಸಭೆಗೆ ಬರಲಿಲ್ಲ ಎಂದು ಸ್ಪಷ್ಟೀಕರಣ ಕೊಟ್ಟಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net