ಶಾರೂಖ್​ಗೆ ರಾಷ್ಟ್ರ ಪ್ರಶಸ್ತಿ ಏಕೆ ಬರಲಿಲ್ಲ? ಅಭಿಮಾನಿಗಳು ಹೇಳ್ತಾರೆ ಕೇಳಿ ...

Shahrukh Khan - Final
Published on

ಸುಶಾಂತ್​ ಸಿಂಗ್​ ರಜಪೂತ್​ ಸಾವಿನ ನಂತರ ಬಾಲಿವುಡ್​ನ ಖಾನ್​ಗಳಿಗೆ ಗಂಡಾಂತರ ಎದುರಾಗಿದೆ. ಸ್ವಜನಪಕ್ಷಪಾತದ ಆರೋಪ ಹೊತ್ತಿರುವ ಖಾನ್​ಗಳನ್ನು ಬ್ಯಾನ್​ ಮಾಡುವುದಕ್ಕೆ ಹಲವರು ಮುಂದಾಗಿದ್ದಾರೆ. ಅಷ್ಟೇ ಅಲ್ಲ, ಮುಂದಿನ ದಿನಗಳಲ್ಲಿ ಖಾನ್​ಗಳ ಚಿತ್ರಗಳನ್ನು ನೋಡದಿರಲು ಹಲವು ರಾಜ್ಯಗಳಲ್ಲಿ ತೀರ್ಮಾನವಾಗಿದೆ. ಅದರಲ್ಲೂ ಬಿಹಾರ, ಜಾರ್ಖಂಡ್​ ಮತ್ತು ಉತ್ತರ ಪ್ರದೇಶದಲ್ಲಿ ದಲ್ಲಿ ಖಾನ್​ಗಳ ಚಿತ್ರಗಳನ್ನು ಯಾವುದೇ ಕಾರಣಕ್ಕೂ ನೋಡುವುದಿಲ್ಲ ಎಂದು ಸುಶಾಂತ್​ ಅಭಿಮಾನಿಗಳು ಹೇಳಿಕೊಂಡಿದ್ದಾರೆ.

ಒಂದು ಕಡೆ ಬಾಯ್ಕಾಟ್​ ಖಾನ್ಸ್​ ಎಂಬ ಅಭಿಯಾನ ನಡೆಯುತ್ತಿದ್ದರೆ, ಇನ್ನೊಂದು ಕಡೆ ಶಾರೂಖ್​ ಖಾನ್​ ಅವರ ಅಭಿಮಾನಿಗಳು, ತಮ್ಮ ನೆಚ್ಚಿನ ನಟನ ಪರವಾಗಿ ನಿಂತಿದ್ದಾರೆ. ಅಷ್ಟೇ ಅಲ್ಲ, ಈ ಸ್ವಜನಪಕ್ಷಪಾತಕ್ಕೆ ಶಾರೂಖ್​ ಖಾನ್​ ಈ ಹಿಂದೆ ಗುರಿಯಾಗಿದ್ದರು, ಈಗಲೂ ಗುರಿಯಾಗುತ್ತಲೇ ಇದ್ದಾರೆ ಎಂದು ಅವರ ಅಭಿಮಾನಿಗಳು ಹೇಳಿಕೊಂಡಿದ್ದಾರೆ.

ಈ ಕುರಿತು ಸಪೋರ್ಟ್​ ಸೆಲ್ಫ್​ ಮೇಡ್​ ಎಸ್​ಆರ್​ಕೆ ಎಂಬ ಅಭಿಯಾನವನ್ನು ಪ್ರಾರಂಭಿಸಿರುವ ಅಭಿಮಾನಿಗಳು, ಶಾರೂಖ್​ ಹೇಗೆ ಕಾಲದಿಂದ ಕಾಲಕ್ಕೆ ಸ್ವಜನಪಕ್ಷಪಾತಕ್ಕೆ ಗುರಿಯಾಗುತ್ತಾ ಬಂದಿದ್ದಾರೆ ಎಂದು ಅವರ ಅಭಿಮಾನಿಗಳು ಬರೆದುಕೊಂಡಿದ್ದಾರೆ.

ಈ ಕುರಿತು ಬರೆದುಕೊಂಡಿರುವ ಶಾರೂಖ್​ ಅಭಿಮಾನಿಗಳು, ಅವರು ಸಹ ಹೊರಗಿನಿಂದಲೇ ಬಂದವರು. ಆರಂಭದಲ್ಲಿ ಅವರಿಗೆ ಚಿತ್ರಗಳಲ್ಲಿ ಅವಕಾಶ ಗಿಟ್ಟಿಸುವುದು ಅಷ್ಟು ಸುಲಭವಾಗಿರಲಿಲ್ಲ. ಸ್ಟಾರ್ ಮಕ್ಕಳ ಎದುರು ಹೋರಾಡುವುದು ಸುಲಭವಾಗಿರಲಿಲ್ಲ.

ನೆಪೋಟಿಸಂನಿಂದಾಗಿಯೇ ಅವರಿಗೆ ಸ್ವದೇಸ್​ ಚಿತ್ರದ ಅಭಿನಯಕ್ಕೆ ರಾಷ್ಟ್ರ ಪ್ರಶಸ್ತಿ ಸಿಗಲಿಲ್ಲ. ಅಷ್ಟೆಲ್ಲಾ ಸಮಸ್ಯೆಗಳ ಎದುರು ಅವರು ಬೆಳೆದು ನಿಂತರು. ಈಗಲೂ ಅವರು ಹಲವು ವಲಯಗಳಿಂದ ಸಮಸ್ಯೆ ಎದುರಿಸುತ್ತಲೇ ಇದ್ದಾರೆ ಎಂದು ಬರೆದಿದ್ದಾರೆ.

ತಮ್ಮ ಮೆಚ್ಚಿನ ನಟನ ಪರವಾಗಿ ನಿಲ್ಲುವುದಷ್ಟೇ ಅಲ್ಲ, ಬೇರೆ ಬೇರೆ ಹೆಸರುಗಳಲ್ಲಿ ಆಂದೋಲನವನ್ನು ಶುರು ಮಾಡಿದ್ದಾರೆ. ಇದೆಲ್ಲದರಿಂದ ಬಾಲಿವುಡ್​ನಲ್ಲಿ ಹೊರಗಿನವರು ಮತ್ತು ಒಳಗಿನವರ ನಡುವಿನ ಕಂದಕ ಹೆಚ್ಚಾಗುತ್ತಿದ್ದು, ಈ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಲೇ ಇವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net