ಸೆಲ್ಫಿ ವೇಳೆ ಅಭಿಮಾನಿಯ ಅಸಭ್ಯ ವರ್ತನೆ ಕಂಡು ನಟಿ ಕಾಜಲ್​ ಅಗರವಾಲ್​ ಶಾಕ್​! ವಿಡಿಯೋ ವೈರಲ್​

Kajal Aggarwal
Published on

ಹೈದರಾಬಾದ್​: ಚಿತ್ರರಂಗದ ಸ್ಟಾರ್ ಹೀರೋ, ಹೀರೋಯಿನ್​ಗಳು ಯಾವುದಾದರೂ ಖಾಸಗಿ ಕಾರ್ಯಕ್ರಮಗಳಿಗೆ, ಶಾಪಿಂಗ್ ಮಾಲ್ ಓಪನಿಂಗ್​ಗೆ ಅಥವಾ ಇನ್ಯಾವುದೇ ಕಾರ್ಯಕ್ರಮಗಳಿಗೆಂದು ಹೊರಗಡೆ ಹೋದಾಗ ನೆಚ್ಚಿನ ಕಲಾವಿದರನ್ನು ನೇರವಾಗಿ ನೋಡಿದ ಖುಷಿಯಲ್ಲಿ ಅಭಿಮಾನಿಗಳು ಕುಣಿದು, ಕುಪ್ಪಳಿಸಿ, ಕೂಗಾಡುತ್ತಾರೆ. ಕೆಲವೊಮ್ಮೆ ಅಭಿಮಾನಿಗಳ ಅತಿಯಾದ ಹುಮ್ಮಸ್ಸಿನ ಕಾರಣದಿಂದಾಗಿ ಸಿನಿ ತಾರೆಯರು ಸಂಕಷ್ಟಕ್ಕೆ ಸಿಲುಕುತ್ತಾರೆ. ಅಭಿಮಾನಿಗಳನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟ ಸಂದರ್ಭಗಳೂ ಇವೆ. ಅಭಿಮಾನಿಗಳ ಘರ್ಷಣೆಯಿಂದ ಸಿನಿಮಾ ತಾರೆಯರಿಗೆ ಅಪಘಾತವಾದ ಪ್ರಕರಣಗಳೂ ಇವೆ. ಇತ್ತೀಚೆಗಷ್ಟೇ ಶಾಪಿಂಗ್ ಮಾಲ್ ಒಂದರ ಉದ್ಘಾಟನೆಗೆ ತೆರಳಿದ್ದ ಖ್ಯಾತ ನಟಿ ಕಾಜಲ್​ ಅಗರ್ವಾಲ್​ಗೆ ಕಹಿ ಅನುಭವವಾಗಿದೆ.

ಏನಾಯ್ತು ಎಂಬುದನ್ನು ನೋಡುವುದಾದರೆ, ಕಾಜಲ್ ಅಗರ್ವಾಲ್ ಮಂಗಳವಾರ ಹೈದರಾಬಾದ್‌ನ ಶಾಪಿಂಗ್ ಮಾಲ್‌ನ ಉದ್ಘಾಟನೆಗೆ ವಿಶೇಷ ಅತಿಥಿಯಾಗಿ ಆಗಮಿಸಿದ್ದರು. ಬಂಜಾರ ಹಿಲ್ಸ್ ರಸ್ತೆ ನಂ.10ರಲ್ಲಿ ಫ್ಯಾಶನ್ ಬಟ್ಟೆ ಅಂಗಡಿ ತೆರೆದಿದ್ದು, ಅದರ ಉದ್ಘಾಟನಾ ಕಾರ್ಯಕ್ರಮಕ್ಕೆ ನಟಿ ಕಾಜಲ್ ಬರುತ್ತಿದ್ದಾರೆ ಎಂಬ ವಿಷಯ ಗೊತ್ತಾದ ಹಿನ್ನೆಲೆಯಲ್ಲಿ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು ಸ್ಥಳಕ್ಕೆ ಧಾವಿಸಿದ್ದರು.

ಈ ವೇಳೆ ಕಾಜಲ್ ಜೊತೆ ಸೆಲ್ಫಿ ತೆಗೆದುಕೊಳ್ಳಲು ಅಭಿಮಾನಿಗಳು ಮುಗಿಬಿದ್ದರು. ನಗುನಗುತ್ತಾ ಎಲ್ಲರಿಗೂ ವಿಶ್ ಮಾಡುತ್ತಿದ್ದ ಕಾಜಲ್​ಗೆ ಅಭಿಮಾನಿಯೊಬ್ಬ ಶಾಕ್ ಕೊಟ್ಟಿದ್ದಾನೆ. ಸೆಲ್ಫಿಗಾಗಿ ಕಾಜಲ್ ಬಳಿ ಹೋದ ಅಭಿಮಾನಿ, ಏಕಾಏಕಿ ಆಕೆಯ ಸೊಂಟದ ಮೇಲೆ ಕೈ ಹಾಕಿದ್ದಾನೆ. ಇದರಿಂದ ಬೆಚ್ಚಿಬಿದ್ದ ಕಾಜಲ್ ಕೂಡಲೇ ಆತನನ್ನು ಪಕ್ಕಕ್ಕೆ ತಳ್ಳಿದ್ದಾರೆ. ಕೈಗಳ ಮೂಲಕ ಏನಿದು ನಿನ್ನ ವರ್ತನೆ ಎಂದು ಪ್ರಶ್ನಿಸಿದ್ದಾರೆ. ಈ ಘಟನೆಗೆ ಸಂಬಂಧಿಸಿದ ವಿಡಿಯೋ ಇದೀಗ ವೈರಲ್ ಆಗುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲೂ ಅಭಿಮಾನಿಯ ಅತಿರೇಕದ ವರ್ತನೆ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.

ಸಿನಿಮಾ ವಿಚಾರಕ್ಕೆ ಬರುವುದಾದರೆ, 2007ರಲ್ಲಿ ತೇಜಾ ನಿರ್ದೇಶನದ ಲಕ್ಷ್ಮಿ ಕಲ್ಯಾಣಂ ಸಿನಿಮಾದಲ್ಲಿ ನಟ ಕಲ್ಯಾಣ್ ರಾಮ್ ಎದುರು ನಾಯಕಿಯಾಗಿ ಕಾಜಲ್​ ಅಗರವಾಲ್​ ಪದಾರ್ಪಣೆ ಮಾಡಿದರು. ಇದಾದ ಬಳಿಕ ಕಾಜಲ್​, ಸತತವಾಗಿ ಸ್ಟಾರ್ ಹೀರೋಗಳ ಜತೆ ನಟಿಸಿ, ಸ್ಟಾರ್​ ಹೀರೋಯಿನ್​ ಪಟ್ಟಗಿಟ್ಟಿಸಿಕೊಂಡರು. ತೆಲುಗು, ತಮಿಳು ಮತ್ತು ಹಿಂದಿ ಭಾಷೆಗಳಲ್ಲಿ ನಟಿಸಿ ಒಳ್ಳೆಯ ಕ್ರೇಜ್ ಗಳಿಸಿದ್ದಾರೆ. ತೇಜಾ ನಿರ್ದೇಶನದ ನೇನೆ ರಾಜು ನೇನೆ ಮಂತ್ರಿ ಚಿತ್ರಕ್ಕಾಗಿ ಅವರು ಅತ್ಯುತ್ತಮ ನಟಿ ಪ್ರಶಸ್ತಿ ಪಡೆದರು.

2020ರಲ್ಲಿ ಕಾಜಲ್​ ಅವರು ಉದ್ಯಮಿ ಗೌತಮ್ ಕಿಚ್ಲು ಅವರನ್ನು ವಿವಾಹವಾದರು. ದಂಪತಿಗೆ ಗಂಡು ಮಗುವಿದೆ. ಇತ್ತೀಚೆಗೆ ಬಾಲಕೃಷ್ಣ ಅಭಿನಯದ ಭಗವಂತ್ ಕೇಸರಿ ಸಿನಿಮಾ ಮೂಲಕ ತೆಲುಗು ಪ್ರೇಕ್ಷಕರ ರಂಜಿಸಿದರು. ಈ ಸಿನಿಮಾ ಹಿಟ್​ ಆಯಿತು. ಇಂಡಿಯನ್ 2, ಉಮಾ ಮತ್ತು ಸತ್ಯಭಾಮಾ ಚಿತ್ರಗಳು ಸದ್ಯ ಶೂಟಿಂಗ್ ಹಂತದಲ್ಲಿವೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net