ಬೆಟ್ಟಿಂಗ್​ ಆ್ಯಪ್​ ಪ್ರಕರಣದಲ್ಲಿ ಇಡಿ ಎಂಟ್ರಿ: ವಿಜಯ್​ ದೇವರಕೊಂಡ, ಪ್ರಕಾಶ್ ರಾಜ್​ ಸೇರಿ 29 ಮಂದಿಗೆ ಸಂಕಷ್ಟ! Betting app case

Betting app case
Published on

Betting app case : ಬೆಟ್ಟಿಂಗ್ ಆ್ಯಪ್ ಪ್ರಚಾರ ಪ್ರಕರಣದಲ್ಲಿ ಪ್ರಮುಖ ಬೆಳವಣಿಗೆಯೊಂದು ನಡೆದಿದೆ. ಇಡಿ (ಜಾರಿ ನಿರ್ದೇಶನಾಲಯ) ಈ ಪ್ರಕರಣದಲ್ಲಿ ಮಧ್ಯ ಪ್ರವೇಶಿಸಿದ್ದು, ನಟರಾದ ವಿಜಯ್ ದೇವರಕೊಂಡ, ರಾಣಾ ದಗ್ಗುಬಾಟಿ, ಮಂಚು ಲಕ್ಷ್ಮಿ, ಪ್ರಕಾಶ್ ರಾಜ್, ನಿಧಿ ಅಗರ್ವಾಲ್, ಅನನ್ಯ ನಾಗಲ್ಲ ಮತ್ತು ಶ್ರೀಮುಖಿ ಸೇರಿದಂತೆ 29 ಸೆಲೆಬ್ರಿಟಿಗಳು ಮತ್ತು ಕಂಪನಿಗಳ ವಿರುದ್ಧ ಬೆಟ್ಟಿಂಗ್ ಆ್ಯಪ್​ಗಳ ಪ್ರಚಾರಕ್ಕೆ ಸಂಬಂಧಿಸಿದಂತೆ ಇಡಿ ಪ್ರಕರಣ ದಾಖಲಿಸಿದೆ.

ಸೆಲೆಬ್ರಿಟಿಗಳು ಮತ್ತು ಸೋಶಿಯಲ್​ ಮೀಡಿಯಾ ಇನ್ಫ್ಲುಯೆನ್ಸರ್​ಗಳು ಅಕ್ರಮ ಬೆಟ್ಟಿಂಗ್​ ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್ ಮಾಡಲು ವ್ಯಾಪಕವಾಗಿ ಪ್ರಚಾರ ಮಾಡಿರುವ ಆರೋಪಗಳಿವೆ. ಪ್ರಚಾರ ಮಾಡಲು ಭಾರಿ ಕಮಿಷನ್ ಮತ್ತು ಸಂಭಾವನೆ ಪಡೆದಿದ್ದಾರೆ ಎಂದು ಹಲವರು ಪೊಲೀಸರಿಗೆ ದೂರು ನೀಡಿದ್ದಾರೆ. ಈ ಅಪ್ಲಿಕೇಶನ್‌ಗಳಿಂದಾಗಿ ಸಾಲದ ಹೊರೆಯಿಂದ ಅನೇಕ ಜನರು ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಸಂಬಂಧ ಹೈದರಾಬಾದ್​ ಪೊಲೀಸರು ಈಗಾಗಲೇ ಎಫ್‌ಐಆರ್‌ ದಾಖಲಿಸಿ, ವಿಚಾರಣೆ ನಡೆಸಿದ್ದಾರೆ. ಹೈದರಾಬಾದ್ ಮತ್ತು ಸೈಬರಾಬಾದ್ ಪೊಲೀಸರು ದಾಖಲಿಸಿದ ಎಫ್‌ಐಆರ್ ಆಧರಿಸಿ ಇಡಿ ಪ್ರಕರಣ ದಾಖಲಿಸಿದೆ.

ಬೆಟ್ಟಿಂಗ್ ಅಪ್ಲಿಕೇಶನ್‌ಗಳ ಪ್ರಚಾರ ಪ್ರಕರಣದಲ್ಲಿ ಪಂಜಾಗುಟ್ಟ ಪೊಲೀಸರು ಈಗಾಗಲೇ ನಿರೂಪಕರಾದ ವಿಷ್ಣು ಪ್ರಿಯಾ, ರಿತು ಚೌಧರಿ, ಶ್ರೀಮುಖಿ ಮತ್ತು ಶ್ಯಾಮಾ ಅವರನ್ನು ವಿಚಾರಣೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

ಬೆಟ್ಟಿಂಗ್ ಆ್ಯಪ್‌ಗಳನ್ನು ಪ್ರಚಾರ ಮಾಡಿದ್ದಕ್ಕಾಗಿ ಇಡಿ ಅಧಿಕಾರಿಗಳು ಸೆಲೆಬ್ರಿಟಿಗಳಾದ ರಾಣಾ ದಗ್ಗುಬಾಟಿ, ಮಂಚು ಲಕ್ಷ್ಮಿ, ವಿಜಯ್ ದೇವರಕೊಂಡ, ಪ್ರಕಾಶ್ ರಾಜ್, ಪ್ರಣೀತಾ, ನಿಧಿ ಅಗರ್ವಾಲ್, ಶ್ರೀಮುಖಿ, ರಿತು ಚೌಧರಿ, ಆ್ಯಂಕರ್ ಶ್ಯಾಮಲಾ, ಅನನ್ಯ ನಾಗಲ್ಲ ಮತ್ತು ಇತರರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಪ್ರಭಾವ ಬೀರಿರುವ ನೀತು ಅಗರ್ವಾಲ್, ವಿಷ್ಣು ಪ್ರಿಯಾ, ವರ್ಷಿಣಿ, ಸಿರಿ ಹನುಮಂತು, ವಸಂತಿ ಕೃಷ್ಣನ್, ಶೋಭಾ ಶೆಟ್ಟಿ, ಅಮೃತ ಚೌಧರಿ, ನಯನಿ ಪಾವನಿ, ನೇಹಾ ಪಠಾಣ್, ಪದ್ಮಾವತಿ, ಪಾಂಡು, ಇಮ್ರಾನ್ ಖಾನ್, ಹರ್ಷ ಸಾಯಿ, ಬಯ್ಯ ಸನ್ನಿ ಯಾದವ್, ಟೇಸ್ಟಿ ಸುಪ್ರೇಜಾ ಸೇರಿ ಕೆಲವು ಯೂಟ್ಯೂಬರ್‌ಗಳ ವಿರುದ್ಧವೂ ಇಡಿ ಪ್ರಕರಣ ದಾಖಲಿಸಿದ್ದು, ತನಿಖೆ ಆರಂಭಿಸಿದೆ.

ಅಂದಹಾಗೆ, ಬೆಟ್ಟಿಂಗ್​ ಆ್ಯಪ್‌ಗಳ ನಿರ್ವಾಹಕರು ಫಾಲೋವರ್ಸ್ ಸಂಖ್ಯೆ ದೊಡ್ಡದಾಗಿದ್ದರೆ ದೊಡ್ಡ ಮೊತ್ತದ ಹಣವನ್ನು ನೀಡಲು ಹಿಂಜರಿಯುತ್ತಿರಲಿಲ್ಲ. ಇನ್​ಸ್ಟಾಗ್ರಾಂನಲ್ಲಿ 5 ಸಾವಿರ ಫಾಲೋವರ್ಸ್ ಇದ್ದರೂ ಸಹ ಅವರು ತಿಂಗಳಿಗೆ 20 ಸಾವಿರದವರೆಗೆ ಹಣವನ್ನು ನೀಡಿದ್ದಾರೆ ಎಂದು ಹೇಳಲಾಗಿದೆ. ಖ್ಯಾತಿಯ ಆಧಾರದ ಮೇಲೆ ಹಣವನ್ನು ನೀಡಿರುವುದಾಗಿ ತಿಳಿದುಬಂದಿದೆ. ಈ ಬೆಟ್ಟಿಂಗ್ ಆ್ಯಪ್‌ಗಳನ್ನು ಪ್ರಚಾರ ಮಾಡಿದವರು ಕನಿಷ್ಠ 50 ಲಕ್ಷ ರೂ. ಗಳಿಸಿದ್ದಾರೆ. ಪೊಲೀಸರು ಅವರ ಬ್ಯಾಂಕ್ ವಹಿವಾಟುಗಳನ್ನು ತನಿಖೆ ಮಾಡುತ್ತಿದ್ದಾರೆ. ಯಾರು ಯಾವ ವಿಡಿಯೋಗಳನ್ನು ಮಾಡಿದ್ದಾರೆ ಮತ್ತು ಅವರು ಎಷ್ಟು ಹಣವನ್ನು ಗಳಿಸಿದ್ದಾರೆ ಎಂಬುದರ ಕುರಿತು ತನಿಖೆ ನಡೆಸುತ್ತಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net