ಹೈಪರ್‌ಥೈಮೀಸಿಯಾ ಸುತ್ತ ದ್ವಂದ್ವ; ಪೊಲಿಟಿಕಲ್ ಡ್ರಾಮ, ಸೈನ್ಸ್ ಫಿಕ್ಷನ್ ಟ್ರೇಲರ್ ಬಿಡುಗಡೆ

dvandva
Published on

ಬೆಂಗಳೂರು: ಹೈಪರ್‌ಥೈಮೀಸಿಯಾ. ನೋಡಿದ ಯಾವುದೇ ವಿಷಯ, ಘಟನೆ ವರ್ಷಗಟ್ಟಲೆ ನೆನಪಿನಲ್ಲಿ ಉಳಿಯುವ ಖಾಯಿಲೆ. ಈ ಖಾಯಿಲೆಯಿಂದ ಬಳಲುತ್ತಿರುವ ಯುವತಿಯ ಸುತ್ತ ಎಲ್. ಭರತ್ ಕಥೆ, ಚಿತ್ರಕಥೆ ಬರೆದು ಸಿನಿಮಾ ನಿರ್ದೇಶಿಸಿದ್ದಾರೆ. ಹೆಸರು ‘ದ್ವಂದ್ವ’.

ಇತ್ತೀಚೆಗಷ್ಟೆ ಚಿತ್ರದ ಟ್ರೇಲರ್ ಮತ್ತು ಹಾಡುಗಳನ್ನು ಬಿಡುಗಡೆ ಮಾಡಲಾಯಿತು. ಇದೊಂದು ಪೊಲಿಟಿಕಲ್ ಡ್ರಾಮ, ಸೈನ್ಸ್ ಫಿಕ್ಷನ್ ಜಾನರ್‌ನ ಚಿತ್ರವಾಗಿದ್ದಯ, ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ನಡೆಯುವ ಕಥೆಯಾಗಿದೆ. ಹೈಪರ್‌ಥೈಮೀಸಿಯಾ ಖಾಯಿಲೆಯಿರುವ ಹುಡುಗಿಯನ್ನು ಪ್ರಭಾವಿ ರಾಜಕಾರಣಿ ಹೇಗೆ ಉಪಯೋಗಿಸಿಕೊಳ್ಳುತ್ತಾನೆ? ಅದರಿಂದ ಆಕೆಯ ಬದುಕು ಏನಾಗುತ್ತದೆ? ಎಂಬುದನ್ನು ಥ್ರಿಲ್ಲರ್ ಅಂಶಗಳೊಂದಿಗೆ ಸಿನಿಮಾ ಮಾಡಿದ್ದಾರೆ ಭರತ್. ನಟ ತಿಲನ್ ಶೇಖರ್ ಚಿತ್ರದ ನಾಯಕನಾಗಿದ್ದು, ಅವರಿಗೆ ‘ಕನ್ಯಾಕುಮಾರಿ’ ಧಾರಾವಾಹಿಯಲ್ಲಿ ನಟಿಸಿದ್ದ ಆಸಿಯಾ ಫಿರ್ದೋಸಿ ಹಾಗೂ ನಯನ ನಾಯಕಿಯರು.

ಜತೆಗೆ ಅನಿತಾ ಭಟ್, ಶೋಭರಾಜ್, ದಿನೇಶ್ ಮಂಗಳೂರು, ಎಚ್‌ಎಂಟಿ ವಿಜಯ್, ರಘು ರಮಣಕೊಪ್ಪ, ಬಲರಾಜವಾಡಿ, ಮಿಮಿಕ್ರಿ ಗೋಪಿ, ವರುಣ್ ಕೃಷ್ಣ ತಾರಾಗಣದಲ್ಲಿದ್ದಾರೆ. ಚಿತ್ರದಲ್ಲಿ ಎರಡು ಹಾಡುಗಳಿದ್ದು ಆಕಾಶ್ ಪರ್ವ ಸಂಗೀತ ನೀಡಿದ್ದಾರೆ. ಚಿತ್ರಕ್ಕೆ ಋಷಿಕೇಶ್ ಸಂಕಲನ, ಗಣೇಶ್ ಸಾಹಸ ಹಾಗೂ ಲಕ್ಷ್ಮಣ್ ನೃತ್ಯ ನಿರ್ದೇಶನವಿರಲಿದೆ. ಬೆಂಗಳೂರು, ಮೂಡಿಗೆರೆ, ಸಕಲೇಶಪುರ, ಊಟಿ ಸುತ್ತಮುತ್ತ 37 ದಿನಗಳ ಕಾಲ ಚಿತ್ರೀಕರಣ ಮಾಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net