Dvandva Movie Review: ನ್ಯಾಯ ನೀತಿಗಳ ನಡುವೆ ದ್ವಂದ್ವ

dvandva-1
Published on

ಚಿತ್ರ: ದ್ವಂದ್ವ
ನಿರ್ದೇಶನ: ಭರತ್
ನಿರ್ಮಾಣ: ಪ್ರದೀಪ್ ಕೌದಳ್ಳಿ, ವಿಶ್ವನಾಥ್ ಎಚ್,
ತಾರಾಗಣ: ತಿಲಕ್ ಶೇಖರ್, ಆಸಿಯಾ ಫಿರ್ದೋಸಿ, ಶೋಭರಾಜ್, ನಯನಾ, ದಿನೇಶ್ ಮಂಗಳೂರು, ಬಾಲ ರಾಜವಾಡಿ, ಅನಿತಾ ಭಟ್ ಮುಂತಾದವರು
ಸ್ಟಾರ್: 3

‘ಸತ್ಯ ಯುಗದಲ್ಲಿ ಧರ್ಮ ಮತ್ತು ಅಧರ್ಮ ಬೇರೆ ಬೇರೆ ಲೋಕದಲ್ಲಿ ಇದ್ದವಂತೆ. ತ್ರೇತಾ ಯುಗದಲ್ಲಿ ಒಂದೇ ಲೋಕದಲ್ಲಿ ಇದ್ದವು. ರಾಮ ಮತ್ತು ರಾವಣ ಇಬ್ಬರೂ ಭೂಮಿಯಲ್ಲಿದ್ದರು. ದ್ವಾಪರ ಯುಗದಲ್ಲಿ ಒಂದೇ ಮನೆಗೆ ಬಂದವು. ಈಗ ಕಲಿಯುಗ. ಒಬ್ಬ ಮನುಷ್ಯನಲ್ಲೇ ಧರ್ಮ ಮತ್ತು ಅಧರ್ಮ ಎರಡೂ ಇವೆ..’ ಎಂಬ ಮಾತು ‘ದ್ವಂದ್ವ’ ಚಿತ್ರದ ಪ್ರಮುಖ ಘಟ್ಟದಲ್ಲ ಬರುತ್ತದೆ. ಕಾಮ, ಕ್ರೋಧ, ಮದ, ಲೋಭ, ಮೋಹ, ಮಾತ್ಸರ್ಯ ಎಂಬ ಅರಿಷಡ್ವರ್ಗಗಳ ಸೆಳೆತಕ್ಕೆ ಸಿಲುಕಿ ಮನುಷ್ಯ ಏನೆಲ್ಲಾ ಹುನ್ನಾರ ನಡೆಸುತ್ತಾನೆ? ಅಧಿಕಾರಕ್ಕಾಗಿ ಯಾವ ಮಟ್ಟಕ್ಕೆ ಇಳಿಯುತ್ತಾನೆ? ಎನ್ನುವುದನ್ನೇ ತೆರೆಯ ಮೇಲೆ ತೋರಿಸುವ ಪ್ರಯತ್ನ ಮಾಡಿದ್ದಾರೆ ನಿರ್ದೇಶಕ ಭರತ್ ಎಲ್. ಅಂದುಕೊಂಡಿದ್ದನ್ನು ಸಾಧಿಸಲು ಸೂಕ್ತವಾದ ಕಥೆಯನ್ನು ರೂಪಿಸಿಕೊಂಡಿದ್ದಾರೆ.

ಒಂದೇ ದಿನದಲ್ಲಿ ನಡೆಯುವ ಘಟನೆಯನ್ನು ಕುತೂಹಲಕಾರಿಯಾಗಿ ತೋರಿಸಿರುವುದು ಒಳ್ಳೆಯ ಪ್ರಯತ್ನ. ಸಿಹಿ (ಆಸಿಯಾ ಫಿರ್ದೋಸಿ) ಮನೆ ಬಿಟ್ಟು ಹೋಗಿರುತ್ತಾಳೆ. ಅವಳಿಗೆ ಹೈಪರ್‌ಥೈಮೇಸಿಯಾ ಎಂಬ ಅಪರೂಪದ ಖಾಯಿಲೆಯಿರುತ್ತದೆ. ಯಾವುದನ್ನೇ ಒಂದು ಕ್ಷಣ ನೋಡಿದರೂ ಅದನ್ನು ಮರೆಯುವುದಿಲ್ಲ. ಯಥಾವತ್ತಾಗಿ ನೆನಪಿನಲ್ಲಿಟ್ಟುಕೊಳ್ಳುತ್ತಾಳೆ. ಆಕೆಗಿರುವ ಈ ಲಕ್ಷಣವನ್ನು ಆಕೆಯ ತಂದೆಯ ಆದಿಯಾಗಿ ಜನರು ಹೇಗೆಲ್ಲಾ ಉಪಯೋಗಿಸುತ್ತಾರೆ? ಎನ್ನುವುದೇ ಕಥೆ. ಇಲ್ಲಿ ಹೈಪರ್‌ಥೈಮೇಸಿಯಾಗಿಂತಲೂ ಇದೊಂದು ಸಸ್ಪೆನ್ಸ್ ಜಾನರ್‌ನ ಸಿನಿಮಾ. ಇಡೀ ಕಥೆಯನ್ನು ಮೂರ್ನಾಲ್ಕು ಆಯಾಮದಲ್ಲಿ, ಎರಡ್ಮೂರು ಕಥೆಗಳನ್ನು ಒಟ್ಟಿಗೆ ಹೆಣೆಯಲಾಗಿದ್ದು, ಚಿತ್ರಕಥೆ ಅಲ್ಲಲ್ಲಿ ಕುತೂಹಲಕಾರಿಯಾಗಿ ಗಮನ ಸೆಳೆಯುತ್ತದೆ. ಆದರೆ, ನಿಧಾನ ಗತಿಯಲ್ಲಿ ಸಾಗುವುದರಿಂದ ಸ್ವಲ್ಪ ಆಗಾಗ ಸ್ಕ್ರೀನ್ ಬಿಟ್ಟು ಮೊಬೈಲ್ ನೋಡುವಂತೆ ಮಾಡುತ್ತದೆ. ಕ್ಲೈಮಾಕ್ಸ್‌ನಲ್ಲಿ ಒಳ್ಳೆಯ ಟ್ವಿಸ್ಟ್ ನೀಡಿದ್ದಾರೆ ಭರತ್.

ಆಕಾಶ್ ಪರ್ವ ಹಿನ್ನೆಲೆ ಸಂಗೀತ ಚಿತ್ರಕ್ಕೆ ಜೀವ ತುಂಬಿದೆ. ಅದರ ಜತೆಗೆ ಸಂಕಲನ ಕೂಡ ಮೆಚ್ಚುವಂಥದ್ದು. ಮುಖ್ಯ ಭೂಮಿಕೆಯಲ್ಲಿ ಆಸಿಯಾ ಫಿರ್ದೋಸಿ ಸಹಜವಾಗಿ ನಟಿಸಿದ್ದಾರೆ. ಜತೆಗೆ ವಿಭಿನ್ನ ಶೇಡ್‌ನಲ್ಲಿ ತಿಲಕ್ ಶೇಖರ್ ಕಾಣಿಸಿಕೊಂಡಿದ್ದಾರೆ. ಬಲರಾಜವಾಡಿ, ದಿನೇಶ್ ಮಂಗಳೂರು, ಶೋಭರಾಜ್, ಅನಿತಾ ಭಟ್ ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಒಂದೇ ಕಥೆಗೆ ಕೇಂದ್ರಿತವಾಗಿದ್ದರೆ ಅಥವಾ ಕೆಲವೆಡೆ ಚಿತ್ರದ ವೇಗಕ್ಕೆ ಇನ್ನಷ್ಟು ಒತ್ತು ನೀಡಿದ್ದರೆ ಇದೊಂದು ಒಳ್ಳೆಯ ಸಸ್ಪೆನ್ಸ್ ಸಿನಿಮಾ ಆಗುವ ಗುಣವಿರುವ ಚಿತ್ರ ಎನ್ನಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net