

ಬೆಂಗಳೂರು: ಇಂದು ರಾಜ್ಯ ರಾಜಧಾನಿಯಲ್ಲಿ ಸರ್ಕಾರ ತಮಿಳುನಾಡಿಗೆ ನೀರು ಹರಿಸುತ್ತಿರುವುದನ್ನು ವಿರೋಧಿಸಿ ವಿವಿಧ ಸಂಘಟನೆಗಳು ಬೆಂಗಳೂರು ಬಂದ್ ನಡೆಸಿತು. ಕಾವೇರಿ ವಿವಾದ ಕುರಿತು ಕನ್ನಡಿಗರು ಧ್ವನಿ ಏರಿಸಿದ್ದು, ಈ ಹೋರಾಟಕ್ಕೆ ಇದೀಗ ಸ್ಯಾಂಡಲ್ವುಡ್ ನಟಿ ರಾಗಿಣಿ ದ್ವಿವೇದಿ ದನಿಗೂಡಿಸಿದ್ದಾರೆ.
ಕಾವೇರಿ ಹೋರಾಟದ ಬಗ್ಗೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ತುಪ್ಪದ ಬೆಡಗಿ ರಾಗಿಣಿ ದ್ವಿವೇದಿ, "ನಮಗೆ ನೀರಿಲ್ಲ ತಮಿಳುನಾಡಿಗೆ ಹೇಗೆ ನೀರು ಬಿಡೋದು? ಕಾವೇರಿ ಹೋರಾಟಕ್ಕೆ ನಾನು ಸದಾ ಸಿದ್ದಳಾಗಿದ್ದೇನೆ. ರೈತರಿಗೆ ನೀರು ಮುಖ್ಯ, ಅವರಿಂದ ನಮ್ಮ ಜೀವನ. ಹೀಗಾಗಿ ಯೋಚನೆ ಮಾಡಿ ನೀರು ಬಿಡುವುದು ಸೂಕ್ತ" ಎಂದು ಹೇಳಿದರು.
"ನಮ್ಮ ರೈತರಿಗೆ ತೊಂದರೆಯಾದರೆ ನಾವು ಹೇಗೆ ಸುಮ್ಮನೆ ಇರಲು ಸಾಧ್ಯ? ಕರ್ನಾಟಕ ನಮ್ಮ ಮನೆ, ನಮ್ಮ ರೈತರ ಹಿತ ಮುಖ್ಯ. ಕನ್ನಡ ಚಿತ್ರರಂಗ ಯಾವಾಗಲೂ ರೈತರ ಪರವಾಗಿ ಇರಲಿದೆ. ಶುಕ್ರವಾರದ ಬಂದ್ಗೆ ಅಗತ್ಯಬಿದ್ದರೆ ಖಂಡಿತವಾಗಿ ನಾನು ಬೆಂಬಲ ಕೊಡುತ್ತೀನಿ" ಎಂದು ಹೇಳಿದರು.