

ಬೆಂಗಳೂರು: 'ನಟ ನಿಹಾಲ್ ಅವರು ಬಹಳ ಚೆನ್ನಾಗಿ ನನ್ನ ಪಾತ್ರವನ್ನು ತೆರೆಯ ಮೇಲೆ ತಂದಿದ್ದಾರೆ. ಅವರು ನನ್ನ ಸ್ಟೈಲ್ ಅನುಕರಿಸುವುದನ್ನು ನೋಡಿದರೆ, ಮುಂದಿನ ದಿನಗಳಲ್ಲಿ ಅವರೂ ಎಲ್ಲಿ ನನ್ನ ತರಹವೇ ಪೇಪರ್ ಮತ್ತು ಲಾರಿ ಬಿಜಿನೆಸ್ ಮಾಡುತ್ತಾರೋ ಎಂಬ ಸಂಶಯ ನನಗೆ ಉಂಟಾಗಿದೆ' ಎಂದು ಡಾ. ವಿಜಯ ಸಂಕೇಶ್ವರ ಹೇಳಿದ್ದಾರೆ.
ಇಂದು ಒರಾಯನ್ ಮಾಲ್ನ ಲೇಕ್ ವ್ಯೂನಲ್ಲಿ 'ವಿಜಯಾನಂದ' ಚಿತ್ರದ ಹಾಡು ಬಿಡುಗಡೆ ಮಾಡಿ ಮಾತನಾಡಿದ ಅವರು, 'ನಿಹಾಲ್ ಚಿತ್ರದಲ್ಲಿ ಎದೆ ಸೆಟಿಸಿಕೊಂಡು ನಡೆಯುತ್ತಾರೆ. ನಾನು ಸಹ ಹಾಗೆಯೇ ನಡೆಯುತ್ತಿದ್ದೆ. ಅವರನ್ನು ಇತ್ತೀಚೆಗೆ ಗಮನಿಸುತ್ತಿದ್ದೇನೆ. ಅವರು ಪರಕಾಯ ಪ್ರವೇಶ ಮಾಡುತ್ತಿದ್ದಾರೆ ಎಂದನಿಸುತ್ತಿದೆ. ನಾನು ಜೀವನದಲ್ಲಿ ಯಾವತ್ತೂ ಹೆದರಿಲ್ಲ. ಯಾವುದರ ಬಗ್ಗೆ ಚಿಂತಿಸಿಲ್ಲ. ನಿಹಾಲ್ ಅವರ ಸ್ಟೈಲ್ ನೋಡಿದರೆ ಅವರು ಈ ಚಿತ್ರ ಮುಗಿದ ಮೇಲೆ ಪತ್ರಿಕೆ ಅಥವಾ ಸಾರಿಗೆ ಬಿಜಿನೆಸ್ ಮಾಡಬಹುದು ಎಂದನಿಸುತ್ತಿದೆ' ಎಂದು ತಮಾಷೆ ಮಾಡಿದರು.
ನಿಹಾಲ್ ಬಹಳ ಕಷ್ಟಪಟ್ಟು ತಮ್ಮ ಪಾತ್ರ ನಿರ್ವಹಿಸಿದ್ದಾರೆ ಎಂದ ಡಾ. ವಿಜಯ ಸಂಕೇಶ್ವರ, 'ನನ್ನನ್ನು ಅನುಕರಿಸುವಲ್ಲಿ ಮತ್ತು ತೆರೆಯ ಮೇಲೆ ಚೆನ್ನಾಗಿ ತರುವಲ್ಲಿ ನಿಹಾಲ್ ಬಹಳ ಕಷ್ಟಪಟ್ಟಿದ್ದಾರೆ. ಇನ್ನು, ನಿರ್ದೇಶಕಿ ರಿಷಿಕಾ ಶರ್ಮ ಅವರ ಆತ್ಮವಿಶ್ವಾಸ ನೋಡಿ, ಅವರಿಗೆ ಒಂದು ಅವರಿಗೆ ಅವಕಾಶ ಕೊಡಬೇಕು ಎಂದನಿಸಿತು. ಅವರು ಶ್ರದ್ಧೆಯಿಂದ ಎರಡು ವರ್ಷಗಳ ಕಾಲ ಬರೀ ಕೆಲಸ ಮಾಡಿಲ್ಲ, ತಪಸ್ಸು ಮಾಡಿದ್ದಾರೆ' ಎಂದು ಹೇಳಿದರು.