‘ದೂರದರ್ಶನ’ ನಟಿಯ ದೂರಾಲೋಚನೆ; ಇಲ್ಲೇ ಇರುವೆ, ಅಲ್ಲಿಗೆ ಹೋಗಲಾರೆ ಎನ್ನುತ್ತಿದ್ದಾರೆ ಅಯಾನ

ayana
Published on

| ಹರ್ಷವರ್ಧನ್ ಬ್ಯಾಡನೂರು

ಗಿರೀಶ್ ಕಾಸರವಳ್ಳಿ ನಿರ್ದೇಶನದ ‘ಇಲ್ಲಿರಲಾರೆ, ಅಲ್ಲಿಗೆ ಹೋಗಲಾರೆ’ ಚಿತ್ರದ ಮೂಲಕ ಸ್ಯಾಂಡಲ್‌ವುಡ್ ಡೆಬ್ಯೂ ಮಾಡಿದ ಅಯಾನ, ಆ ಬಳಿಕ ‘ದೂರದರ್ಶನ’ ಚಿತ್ರದಲ್ಲಿ ಮಿಂಚಿದ್ದರು. ಇದೀಗ ಹೊಸ ಕಥೆಗಳನ್ನು ಕೇಳುತ್ತಿರುವ ಅವರು, ಉತ್ತಮ ಕಥೆಗಳಿಗೆ ಕಾಯುತ್ತಿದ್ದಾರಂತೆ.

‘ತುಂಬ ಆ್ಯಡ್ ಶೂಟ್‌ಗಳನ್ನು ಮಾಡುತ್ತಿದ್ದೇನೆ. ಹಲವು ಚಿತ್ರಗಳಲ್ಲಿ ಅವಕಾಶ ಬಂದರೂ, ಉತ್ತಮ ಕಥೆಗಳಲ್ಲಿ ನಟಿಸಬೇಕು ಮತ್ತು ಗಟ್ಟಿ ಪಾತ್ರಗಳನ್ನು ಮಾಡಬೇಕು ಅಂತ ಸದ್ಯಕ್ಕೆ ಯಾವುದನ್ನೂ ಒಪ್ಪಿಕೊಂಡಿಲ್ಲ. ‘ದೂರದರ್ಶನ’ ಮುಗ್ಧ, ಸಾಫ್ಟ್ ಹುಡುಗಿಯಾಗಿ ಕಾಣಿಸಿಕೊಂಡಿದ್ದ ನನ್ನ ಪಾತ್ರ ಜನರಿಗೆ ಇಷ್ಟವಾಗಿತ್ತು. ಹೀಗಾಗಿ ಅದೇ ರೀತಿಯ ಕಥೆಗಳು ಬರುತ್ತಿವೆ. ಆದರೆ, ನನಗೆ ವಿಭಿನ್ನವಾಗಿರುವ ಬೋಲ್ಡ್, ಸ್ಟ್ರಾಂಗ್ ಪಾತ್ರ ಮಾಡುವಾಸೆ. ತೆರೆಯ ಮೇಲೆ ಕಡಿಮೆ ಕಾಣಿಸಿಕೊಂಡರೂ, ಪಾತ್ರ ತುಂಬ ಚೆನ್ನಾಗಿರಬೇಕು’ ಎನ್ನುತ್ತಾರೆ ಅಯಾನ.

ಧಾರಾವಾಹಿಗಳಲ್ಲಿ ಅವಕಾಶ ಸಿಕ್ಕರೂ ಒಪ್ಪಿಕೊಂಡಿಲ್ಲವಂತೆ. ಅದಕ್ಕೆ ಕಾರಣ ತಿಳಿಸುವ ಅವರು, ‘ನನಗೆ ಸಿನಿಮಾ ಮೇಲೆ ಇಂಟರೆಸ್ಟ್ ಹೆಚ್ಚು. ಹೀಗಾಗಿಯೇ ನನ್ನ ಗಮನವೆಲ್ಲ ಸಿನಿಮಾಗಳ ಮೇಲಿದೆ. ಧಾರಾವಾಹಿಗಳಲ್ಲಿ ಅವಕಾಶಗಳು ಬಂದರೂ ಒಪ್ಪಿಕೊಳ್ಳಲಿಲ್ಲ. ಕಾದು ನೋಡಿ ಉತ್ತಮ ಸಿನಿಮಾಗಳನ್ನೇ ಮಾಡುತ್ತೇನೆ’ ಎಂದವರು ಭರವಸೆ ವ್ಯಕ್ತಪಡಿಸುತ್ತಾರೆ.

‘ಮುಂದಿನ ಚಿತ್ರ ಮಾಡಿದರೆ ಎಲ್ಲರಿಗೂ ಇಷ್ಟವಾಗುವ ಪಾತ್ರ, ನಟನೆಗೆ ಪ್ರಾಮುಖ್ಯತೆ ಇರುವ ರೋಲ್ ಮಾಡುತ್ತೇನೆ’ ಎಂದು ಆತ್ಮವಿಶ್ವಾಸದಿಂದ ನುಡಿಯುತ್ತಾರೆ ಅಯಾನ. ಅಂದಹಾಗೆ, ಅವರಿಗೆ ಪೌರಾಣಿಕ ಪಾತ್ರ ಮಾಡಲು ಇಷ್ಟವಂತೆ. ಮೂಲತಃ ಬೆಂಗಳೂರಿನವರೇ ಆದ ಅಯಾನ ಭರತನಾಟ್ಯಂ ಡಾನ್ಸರ್. ಜತೆಗೆ ರಂಗಭೂಮಿಯಲ್ಲಿ ಹಿರಿಯ ರಂಗಕರ್ಮಿ, ನಿರ್ದೇಶಕ ಎಂ.ಎಸ್. ಸತ್ಯು ಅವರ ಬಳಿ ಅನುಭವ ಪಡೆದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net