More

    ಕನ್ನಡದಲ್ಲೊಂದು ಮೆಗಾ ವೆಬ್‌ಸಿರೀಸ್; ಸ್ವಾತಂತ್ರ್ಯಪೂರ್ವ ಕಥೆ ಹೇಳಲು ಮನೋಹರ್ ಜೋಶಿ ಸಿದ್ಧತೆ

    | ಹರ್ಷವರ್ಧನ್ ಬ್ಯಾಡನೂರು

    ಕನ್ನಡ ಸಿನಿಮಾಗಳು ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿವೆ. ಆದರೆ, ವೆಬ್‌ಸರಣಿ ವಿಷಯದಲ್ಲಿ ಸ್ಯಾಂಡಲ್‌ವುಡ್ ಸಾಕಷ್ಟು ಹಿಂದೆ ಉಳಿದಿದೆ. ಹಿಂದಿ, ತೆಲುಗು, ತಮಿಳು, ಮಲಯಾಳಂ ವೆಬ್‌ಸರಣಿಗಳು ಓಟಿಟಿಗಳಲ್ಲಿ ಸಾಕಷ್ಟಿವೆ. ಆದರೆ, ಕನ್ನಡ ಸರಣಿಗಳು ಯೂಟ್ಯೂಬ್ ಬಿಟ್ಟರೆ ಕೆಲವು ಕನ್ನಡದ ಓಟಿಟಿಗಳಲ್ಲಿ ಕನ್ನಡ ಭಾಷೆಯಲ್ಲಿ ಮಾತ್ರ ಲಭ್ಯ. ಬೇರೆ ಭಾಷೆಗಳ ಸರಣಿಗಳೇ ಕನ್ನಡದಲ್ಲೂ ಡಬ್ ಆಗುತ್ತಿರುವ ಕಾರಣ, ಇಲ್ಲಿನವರೂ ವೆಬ್‌ಸರಣಿ ಮಾಡುವ ಬಗ್ಗೆ ಗಮನ ಹರಿಸಿರಲಿಲ್ಲ. ಇದೀಗ 30 ಸಿನಿಮಾಗಳಿಗೆ ಛಾಯಾಗ್ರಾಹಕನಾಗಿ ಅನುಭವ ಪಡೆದಿರುವ ಮನೋಹರ್ ಜೋಶಿ, ಕನ್ನಡದಲ್ಲಿ ಮೆಗಾ ವೆಬ್‌ಸರಣಿಗೆ ಆ್ಯಕ್ಷನ್ ಕಟ್ ಹೇಳಲು ಸಿದ್ಧತೆ ನಡೆಸಿದ್ದಾರೆ. ಹಿಂದಿಯ ‘ಉಧಂಗಢ್’ ಮತ್ತು ‘ಏಯ್ತ ಮ್ಯಾನ್’ ಎಂಬ ಎರಡು ವೆಬ್‌ಸರಣಿಗಳಲ್ಲಿ ಛಾಯಾಗ್ರಾಹಕನಾಗಿ ಕೆಲಸ ಮಾಡಿರುವ ಅವರು, ‘ಸಿನಿಮಾ ನಿರ್ದೇಶನ ಮಾಡಬೇಕು ಅಂತ ಪ್ಲ್ಯಾನ್ ಇತ್ತು. ಆದರೆ ನಾನು ಮಾಡಿಕೊಂಡಿದ್ದ ಕಥೆಯನ್ನು ಸಿನಿಮಾದಲ್ಲಿ ಕಟ್ಟಿಕೊಡಲು ಸಾಧ್ಯವಾಗುವುದಿಲ್ಲ ಅಂತ, ವೆಬ್‌ಸರಣಿ ಮಾಡಲಿದ್ದೇನೆ. ಈಗ ಕೊನೆಯ ಹಂತದ ಬರವಣಿಗೆ ಕೆಲಸಗಳು ನಡೆಯುತ್ತಿವೆ. ಸ್ವಾತಂತ್ರ್ಯಪೂರ್ವ ಕಥೆಯಿದು’ ಎಂದು ಮಾಹಿತಿ ನೀಡುತ್ತಾರೆ.

    1930ರ ದಶಕದ ನೈಜ ಘಟನೆ
    ಸ್ವಾತಂತ್ರ್ಯಪೂರ್ವದಲ್ಲಿ ಕರ್ನಾಟಕ ಮತ್ತು ಆಂಧ್ರಪ್ರದೇಶದಲ್ಲಿ ನಡೆದ ನೈಜ ಘಟನೆಯ ಸುತ್ತ ವೆಬ್‌ಸರಣಿ ಹೆಣೆಯುತ್ತಿದ್ದಾರೆ ಮನೋಹರ್. ‘ಕೆಲವು ವರ್ಷಗಳ ಹಿಂದೆ ಈ ಘಟನೆಯ ಕುರಿತು ಮಾಹಿತಿ ದೊರೆಯಿತು, ಕುತೂಹಲ ಹೆಚ್ಚಾಗಿ ರೀಸರ್ಚ್ ಮಾಡತೊಡಗಿದೆ. ಆನ್‌ಲೈನ್‌ನಲ್ಲಿ ಎಲ್ಲೂ ಮಾಹಿತಿ ಇರಲಿಲ್ಲ. ಹೀಗಾಗಿ ಕೆಲವು ಇತಿಹಾಸತಜ್ಞರು, ಪತ್ರಕರ್ತರನ್ನ ಭೇಟಿಯಾಗಿ ಮಾಹಿತಿ ಪಡೆದೆ. ಆರು ವರ್ಷಗಳ ಕಾಲ ರೀಸರ್ಚ್ ಮಾಡಿದೆ. ಶೇಕಡಾ 90ರಷ್ಟು ನೈಜತೆಗೆ ಹತ್ತಿರವಾಗಿಯೇ ಈ ಸರಣಿ ಮಾಡಲಿದ್ದೇನೆ. ಶೇಕಡಾ 10ರಷ್ಟು ಸಿನಿಮಾಗೆ ಬೇಕಾದ ಬದಲಾವಣೆ ಮಾಡಲಿದ್ದೇನೆ. ಹೊಸ ವರ್ಷದ ಆರಂಭದಲ್ಲಿ ಚಿತ್ರೀಕರಣಕ್ಕೆ ತೆರಳಲಿದ್ದೇನೆ’ ಎಂದು ಹೇಳಿಕೊಳ್ಳುತ್ತಾರೆ.

    ಮನೋಹರ್‌ಗೆ ಕಾವ್ಯ ಶಾಸಿ ಸಾಥ್
    ನಟಿ ಕಾವ್ಯ ಶಾಸಿ ಕೂಡ ಮನೋಹರ್ ಜೋಶಿಗೆ ಈ ಪ್ರಾಜೆಕ್ಟ್‌ನಲ್ಲಿ ಕೈಜೋಡಿಸಿದ್ದಾರೆ. ಧಾರಾವಾಹಿ, ಸಿನಿಮಾಗಳಲ್ಲಿ ನಟಿಸಿ ಗಮನ ಸೆಳೆದಿದ್ದ ಅವರು, ಇದೀಗ ಈ ವೆಬ್‌ಸರಣಿಗೆ ಚಿತ್ರಕಥೆ ಮತ್ತು ಸಂಭಾಷಣೆ ಬರೆಯುತ್ತಿದ್ದಾರೆ. ಆ ಮೂಲಕ ಬರಹಗಾರ್ತಿಯಾಗಿ ಓಟಿಟಿಗೆ ಡೆಬ್ಯೂ ಮಾಡಲಿದ್ದಾರೆ. ‘ಕಾವ್ಯ ಶಾಸಿಗೆ ಇತಿಹಾಸದ ಬಗ್ಗೆ ತುಂಬ ಕುತೂಹಲ. ಸಾಕಷ್ಟು ಓದಿ, ತಿಳಿದುಕೊಂಡಿದ್ದಾರೆ. ಭಾಷೆಯ ಜ್ಞಾನ ಚೆನ್ನಾಗಿದೆ. ಅವರ ಬಳಿ ಈ ಐಡಿಯಾ ಹೇಳಿದಾಗ ಒಪ್ಪಿಕೊಂಡರು. ಏಳೆಂಟು ತಿಂಗಳಿನಿಂದ ಒಟ್ಟಿಗೆ ಕೆಲಸ ಮಾಡುತ್ತಿದ್ದೇವೆ’ ಎನ್ನುತ್ತಾರೆ ಮನೋಹರ್.

    ಕನ್ನಡದಲ್ಲೊಂದು ಮೆಗಾ ವೆಬ್‌ಸಿರೀಸ್; ಸ್ವಾತಂತ್ರ್ಯಪೂರ್ವ ಕಥೆ ಹೇಳಲು ಮನೋಹರ್ ಜೋಶಿ ಸಿದ್ಧತೆ

    ಮೂರು ಭಾಷೆಗಳಲ್ಲಿ ವೆಬ್‌ಸರಣಿ
    ಸಾಮಾನ್ಯವಾಗಿ ವೆಬ್‌ಸರಣಿಗಳು ದೊಡ್ಡ ಬಜೆಟ್‌ನಲ್ಲಿ ನಿರ್ಮಾಣವಾಗುವ ಕಾರಣ, ಬಹುಭಾಷೆಗಳಲ್ಲಿ ಮೂಡಿಬರುತ್ತವೆ. ಅದೇ ರೀತಿ ಮನೋಹರ್ ಕೂಡ ಪ್ಲ್ಯಾನ್ ಮಾಡಿಕೊಂಡಿದ್ದಾರೆ. ‘ಕರ್ನಾಟಕ – ಆಂಧ್ರ ಪ್ರದೇಶ ಗಡಿಯಲ್ಲಿ ಕಥೆ ನಡೆಯುವ ಕಾರಣ ಕನ್ನಡ ಮತ್ತು ತೆಲುಗಿನಲ್ಲಿ ಈ ಸರಣಿ ರಿಲೀಸ್ ಆಗಲಿದೆ. ಹಾಗೇ ಕನ್ನಡ ಮತ್ತು ತೆಲುಗು ಮಿಶ್ರಣದಲ್ಲಿಯೂ ಒಂದು ವರ್ಷನ್ ಬರಲಿದೆ. ಒಟ್ಟು 10 ಎಪಿಸೋಡ್‌ಗಳಲ್ಲಿ ಈ ಕಥೆ ಇರಲಿದೆ’ ಎಂದು ಮಾಹಿತಿ ನೀಡುತ್ತಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts