ಬೆಟ್ಟಿಂಗ್​ ಮಾಡಿ ಲೈಫ್​ ಹಾಳು ಮಾಡಿಕೊಳ್ಳಬೇಡಿ ... ಅಭಿಮಾನಿಗಳಿಗೆ ದರ್ಶನ್​ ಸಲಹೆ

Darshan - Final
Published on

ಬೆಂಗಳೂರು: ಐಪಿಎಲ್​ನ ಈ ಸೀಸನ್​ ಶುರುವಾಗಿದೆ. ಈಗಾಗಲೇ ಚೆನ್ನೈ ಸೂಪರ್​ ಕಿಂಗ್ಸ್​ ಮತ್ತು ಮುಂಬೈ ಇಂಡಿಯನ್ಸ್​ ವಿರುದ್ಧ ಮೊದಲ ಪಂದ್ಯ ಪ್ರಾರಂಭವಾಗಿದೆ. ಈ ಮಧ್ಯೆ ದರ್ಶನ್​ ಅವರ ಹಳೆಯ ವಿಡಿಯೋವೊಂದು ಹೊಸದಾಗಿ ವೈರಲ್​ ಆಗುತ್ತಿದೆ.

ಐಪಿಎಲ್​ಗೂ ದರ್ಶನ್​ ಅವರ ವಿಡಿಯೋಗೂ ಏನು ಸಂಬಂಧ ಎಂಬ ಪ್ರಶ್ನೆ ಸಹಜವಾಗಿಯೇ ಬರಬಹುದು. ಸಂಬಂಧ ಇದೆ. ಐಪಿಎಲ್​ನ ಪ್ರತೀ ಪಂದ್ಯಕ್ಕೂ ದೊಡ್ಡ ಮಟ್ಟದ ಬೆಟ್ಟಿಂಗ್​ ನಡೆಯುತ್ತಿದೆ. ಹಲವರು ಬೆಟ್ಟಿಂಗ್​ನಲ್ಲಿ ಸೋತಿದ್ದರಿಂದ ಮನೆ ಕಳೆದುಕೊಂಡಿರುವ ಹಲವು ಉದಾಹರಣೆಗಳಿವೆ.

ಈ ನಿಟ್ಟಿನಲ್ಲಿ ದರ್ಶನ್​ ಅವರು ಎರಡು ವರ್ಷಗಳ ಹಿಂದೊಂದು ವಿಡಿಯೋ ಮಾಡಿದ್ದರು. ಬೆಟ್ಟಿಂಗ್​ನಲ್ಲಿ ಹಣ ಕಳೆದುಕೊಂಡು, ನಿಮ್ಮ ಲೈಫ್​ ಹಾಳು ಮಾಡಿಕೊಳ್ಳಬೇಡಿ ಎಂದು ಅಭಿಮಾನಿಗಳು ಸಲಹೆ ನೀಡಿದ್ದರು. ಆ ವಿಡಿಯೋ ಇದೀಗ ಮತ್ತೆ ಇಂಟರ್​ನೆಟ್​ನಲ್ಲಿ ವೈರಲ್​ ಆಗಿದೆ.

ಆರು ದಿನಗಳ ಹಿಂದೆ ಈ ವಿಡಿಯೋ ಯೂಟ್ಯೂಬ್​ನಲ್ಲಿ ಮೊದಲಿಗೆ ಕಾಣಿಸಿಕೊಂಡಿತ್ತು. ಈ ವಿಡಿಯೋ ಇದೀಗ ಸೋಷಿಯಲ್​ ಮೀಡಿಯಾದಲ್ಲೂ ಸಾಕಷ್ಟು ಹರಿದಾಡುತ್ತಿರುವುದು ವಿಶೇಷ. ಇಷ್ಟಕ್ಕೂ ದರ್ಶನ್​ ಈ ವಿಡಿಯೋದಲ್ಲಿ ಏನು ಹೇಳಿದ್ದಾರೆ ಎಂಬ ಪ್ರಶ್ನೆ ಬರುವುದು ಸಹಜ.

ಬೆಟ್ಟಿಂಗ್​ ಕುರಿತು ಮಾತನಾಡಿರುವ ಅವರು, 'ಐಪಿಎಲ್​ ಸೀಸನ್​ನಲ್ಲಿ ಮ್ಯಾಚ್​ ನೋಡೋಕ್ಕಿಂತ ಹೆಚ್ಚಾಗಿ ಬೆಟ್ಟಿಂಗ್​ ಆಡುವ ಜನರಿದ್ದಾರೆ. ಇವತ್ತು ಇವನ ಹತ್ತಿರ ಸಾಲ ಮಾಡಿ ಸೋತರೆ, ನಾಳೆ ಇನ್ನೊಬ್ಬನ ಹತ್ತಿರ ಸಾಲ ಮಾಡುತ್ತಾರೆ. ದಯವಿಟ್ಟು ಐಪಿಎಲ್​ನ ಮ್ಯಾಚ್​ ಆಗಿ ನೋಡಿ. ಆಟಗಾರರು ಮ್ಯಾಚ್​ ಗೆಲ್ಲಬೇಕು ಎಂಬ ದೃಷ್ಟಿಯಲ್ಲಿ ಆಡುತ್ತಿರುತ್ತಾರೆ. ಸ್ಟ್ರಾಟಜಿಗಳನ್ನು ಮಾಡುತ್ತಿರುತ್ತಾರೆ. ಅದನ್ನ ನಂಬಿ, ನೀವು ನಿಮ್ಮ ಲೈಫ್​ ಹಾಳು ಮಾಡಿಕೊಳ್ಳಬೇಡಿ. ಮ್ಯಾಚ್​ಗಳನ್ನು ನೋಡಿ, ಪ್ರೋತ್ಸಾಹ ಕೊಡಿ' ಎಂದು ದರ್ಶನ್​ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net