ಕಷ್ಟವಾದ್ರೆ ಮುಂಬೈಗೆ ಬರಬೇಡಿ ... ಕಂಗನಾಗೆ ಹೀಗೊಂದು ಸಲಹೆ

Kangana Ranaut - Final
Published on

ಮುಂಬೈ ಕಮಿಷನರ್​ ಪರಂ ಬೀರ್​ ಸಿಂಗ್​ ಅವರು ಅವಹೇಳನಕಾರಿಯಾಗಿ ಮಾತನಾಡುವವರನ್ನು ಪ್ರೋತ್ಸಾಹಿಸುತ್ತಿದ್ದರೆ ತಮ್ಮಂತವರಿಗೆ ಭದ್ರತೆ ಎಲ್ಲಿ, ತಮ್ಮಂತವರು ಮುಂಬೈನಲ್ಲಿ ಸುರಕ್ಷಿತವಾಗಿರುವುದು ಹೇಗೆ ಸಾಧ್ಯ ಎಂದು ಬುಧವಾರವಷ್ಟೇ ಬಾಲಿವುಡ್​ ನಟಿ ಕಂಗನಾ ರಣಾವತ್​ ಪ್ರಶ್ನೆ ಮಾಡಿದ್ದರು. ಆ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದೆ.

ಈ ಕುರಿತು ಮಾತನಾಡಿರುವ ಶಿವಸೇನಾ ಪಕ್ಷದ ಮುಖಂಡ ಸಂಜಯ್​ ರೌತ್​ ಅವರು, ನೀವು ಮುಂಬೈಗೆ ಬರಲೇ ಬೇಡಿ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲ, ಈ ರೀತಿ ಮಾತನಾಡುವ ಮೂಲಕ ಮುಂಬೈ ಪೊಲೀಸರಿಗೆ ಅವಮಾನ ಮಾಡಿದ್ದಾರೆ ಎಂದು ಕಂಗನಾ ವಿರುದ್ಧ ಆರೋಪ ಮಾಡಿದ್ದಾರೆ ರೌತ್​.

'ಸಾಮ್ನಾ' ಪತ್ರಿಕೆಯಲ್ಲಿ ಈ ಬಗ್ಗೆ ಬರೆದಿರುವ ಅವರು,'ಇದು ಪೊಲೀಸರಿಗೆ ಅವಮಾನವಲ್ಲದೆ ಮತ್ತೇನೂ ಅಲ್ಲ. ಮುಂಬೈನಲ್ಲಿದ್ದುಕೊಂಡೇ ಮುಂಬೈ ಪೊಲೀಸರನ್ನೇ ಅವಮಾನ ಮಾಡುತ್ತಾರೆ ಎಂದರೆ ಏನು ಹೇಳುವುದು. ಮುಂಬೈ ಪೊಲೀಸರ ಬಗ್ಗೆ ಅಷ್ಟೊಂದು ಭಯವಿದ್ದರೆ ಮುಂಬೈಗೆ ಬರಲೇ ಬೇಡಿ' ಎಂದು ಸಂಜಯ್​ ರೌತ್​ ಹೇಳಿದ್ದಾರೆ.

ಇದಕ್ಕೂ ಮುನ್ನ, ಕಂಗನಾ ತಮ್ಮ ಟೀಮ್​ ಕಂಗನಾ ಅಕೌಂಟ್​ ಮೂಲಕ ಟ್ವೀಟ್​ ಮಾಡಿದ್ದರು. ಯಾರೋ ಅದಕ್ಕೆ ಸರಿಯಾಗಿ ಕಾಲೆಳೆದಿದ್ದರು. ಅದಕ್ಕೆ ಮುಂಬೈ ಪೊಲೀಸ್​ ಕಮೀಷನರ್​ ಖಾತೆಯಿಂದ ಲೈಕ್​ ಒತ್ತಲಾಗಿತ್ತು. ಈ ಕುರಿತು ಟ್ವೀಟ್​ ಮಾಡಿರುವ ಅವರು, 'ಸುಶಾಂತ್​ ಪರವಾಗಿ ನಾನು ಫೈಟ್​ ಮಾಡಿ, ನ್ಯಾಯ ಕೇಳುವುದು ಹಲವರಿಗೆ ಸಹಿಸುವುದಕ್ಕೆ ಆಗುತ್ತಿಲ್ಲ. ಅದೇ ಕಾರಣಕ್ಕೆ ನನ್ನ ಬಗ್ಗೆ ಇಲ್ಲ ಸಲ್ಲದ ಮಾತಾಡುತ್ತಿದ್ದಾರೆ. ನನಗೆ ಬೆದರಿಕೆ ಹಾಕುತ್ತಿದ್ದಾರೆ. ವಿಚಿತ್ರ ಎಂದರೆ ಕಮಿಷನರ್​ ಅವರೇ ಅದಕ್ಕೆ ಪ್ರೋತ್ಸಾಹ ನೀಡುತ್ತಿದ್ದಾರೆ. ನಾಚಿಕೆ ಆಗಬೇಕು' ಎಂದು ಕಂಗನಾ ಬರೆದುಕೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net