

ಬೆಂಗಳೂರು: ಪವನ್ ಒಡೆಯರ್, ‘ಡೊಳ್ಳು ಎಂಬ ಚಿತ್ರದ ಮೂಲಕ ನಿರ್ವಪಕರಾದ ವಿಷಯ ಗೊತ್ತಿರಬಹುದು. ಈ ಚಿತ್ರ ಹಲವು ಚಿತ್ರೋತ್ಸವಗಳಲ್ಲಿ ಪ್ರದರ್ಶನವಾದ ವಿಷಯವೂ ತಿಳಿದಿರಬಹುದು. ಈಗ ಆ ಚಿತ್ರವನ್ನು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡುವುದಕ್ಕೆ ಪವನ್ ಮುಂದಾಗಿದ್ದಾರೆ. ಎಲ್ಲ ಅಂದುಕೊಂಡಂತೆ ಆದರೆ, ಜುಲೈನಲ್ಲಿ ಚಿತ್ರ ಬಿಡುಗಡೆಯಾಗಲಿದೆ.
‘ಡೊಳ್ಳು’ ಕುರಿತು ಮಾತನಾಡುವ ಪವನ್, ‘ಒಡೆಯರ್ ಮೂವೀಸ್ನಡಿ ನಿರ್ವಣವಾದ ಮೊದಲ ಚಿತ್ರ ಇದು. ನನ್ನ ಪತ್ನಿ ಅಪೇಕ್ಷಾ ಮತ್ತು ಸ್ನೇಹಿತರೊಡಗೂಡಿ ಈ ಚಿತ್ರ ನಿರ್ವಿುಸಿದ್ದೇನೆ. ನಿರ್ವಪಕನಾಗಿ ನನಗೆ ಇದು ಹೊಸ ಅನುಭವ. ಡೊಳ್ಳು ಕಲಾವಿದರು ಅಭಿನಯಿಸಿದ ಚಿತ್ರ ಇದು’ ಎಂದು ಚಿತ್ರದ ಬಗ್ಗೆ ಮಾಹಿತಿ ಕೊಡುತ್ತಾರೆ.
ನಟ ಹಾಗೂ ಕರ್ನಾಟಕ ಚಲನಚಿತ್ರ ಅಕಾಡೆಮಿಯ ಅಧ್ಯಕ್ಷ ಸುನೀಲ್ ಪುರಾಣಿಕ್ ಅವರ ಮಗ ಸಾಗರ್ ಪುರಾಣಿಕ್ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಇದಕ್ಕೂ ಮುನ್ನ ಕೆಲವು ಕಿರುಚಿತ್ರಗಳನ್ನು ನಿರ್ದೇಶಿಸಿದ್ದ ಸಾಗರ್, ತಮಗೆ ಅವಕಾಶ ಕೊಟ್ಟ ಎಲ್ಲರಿಗೂ ಥ್ಯಾಂಕ್ಸ್ ಹೇಳುತ್ತಾರೆ. ‘ಕಿರುಚಿತ್ರಗಳನ್ನು ನಿರ್ದೇಶನ ಮಾಡಿದವರಿಗೆ ಸಿನಿಮಾ ಮಾಡುವುದು ದೊಡ್ಡ ಸಾಹಸ. ಈ ಸಾಹಸಕ್ಕೆ ಕಾರಣರಾದ ಎಲ್ಲರಿಗೂ ಧನ್ಯವಾದ’ಗಳನ್ನು ಅರ್ಪಿಸುತ್ತಾರೆ ಅವರು.
ಕಿರುತೆರೆ ನಟ ಕಾರ್ತಿಕ್ ಮಹೇಶ್ ಹಾಗೂ ನಿಧಿ ಹೆಗಡೆ ನಾಯಕ-ನಾಯಕಿಯಾಗಿ ನಟಿಸಿರುವ ಈ ಚಿತ್ರದಲ್ಲಿ ಬಾಬು ಹಿರಣ್ಣಯ್ಯ, ಚಂದ್ರ ಮಯೂರ್ ಮುಂತಾದವರು ನಟಿಸಿದ್ದಾರೆ. ಅನಂತ್ ಕಾಮತ್ ಸಂಗೀತ ಮತ್ತು ಅಭಿಲಾಷ್ ಕಲಾಥಿ ಛಾಯಾಗ್ರಹಣ ಈ ಚಿತ್ರಕ್ಕಿದೆ.