ಪುಷ್ಪ ಚಿತ್ರದಲ್ಲಿ ತೋರಿಸಿರೋ ರಕ್ತಚಂದನ ನಿಜಕ್ಕೂ ಕೋಟಿಗಟ್ಟಲೆ ಬೆಲೆ ಬಾಳುತ್ತಾ? ಉಪಯೋಗವೇನು? ಇಲ್ಲಿದೆ ಅಚ್ಚರಿ ಮಾಹಿತಿ... Red Sandalwood

Red Sandalwood
Published on

Red Sandalwood : ಸಾಮಾನ್ಯವಾಗಿ ಶ್ರೀಗಂಧದ ಮರ ಕಳ್ಳಸಾಗಾಣಿಕೆ ವಿಚಾರಕ್ಕೆ ಬಂದಾಗ ಎಲ್ಲರಿಗೂ ಮೊದಲು ನೆನಪಾಗುವುದು ಕಾಡುಗಳ್ಳ ವೀರಪ್ಪನ್. ಆದರೆ, ಈಗ ನೆನಪಿಗೆ ಬರುವುದು ಐಕಾನ್​ ಸ್ಟಾರ್​ ಅಲ್ಲು ಅರ್ಜುನ್​ ನಟನೆಯ ಬ್ಲಾಕ್​ಬಸ್ಟರ್​ ಪುಷ್ಪ ಸಿನಿಮಾ.

ರಕ್ತಚಂದನ ( Red Sandalwood ) ಕಳ್ಳಸಾಗಾಣೆಗೆ ಸಂಬಂಧಿಸಿದ ಕಥಾಹಂದರದೊಂದಿಗೆ ಪುಷ್ಪ ಚಿತ್ರದ ಮೊದಲ ಭಾಗವು 2021ರಲ್ಲಿ ಬಿಡುಗಡೆಯಾಯಿತು. ಈ ಸಿನಿಮಾದ ದೊಡ್ಡ ಯಶಸ್ಸಿನ ನಂತರ, ಅದರ ಎರಡನೇ ಭಾಗವನ್ನು ಮಾಡಲಾಯಿತು. ಡಿಸೆಂಬರ್​ 5ರಂದು ಎರಡನೇ ಭಾಗ ಬಿಡುಗಡೆಯಾಯಿತು. ಅಂದಿನಿಂದ ಈ ಸಿನಿಮಾ ಉತ್ತಮ ಪ್ರದರ್ಶನ ಕಾಣುತ್ತಿದೆ. ಈಗಾಗಲೇ ಬಾಕ್ಸ್​ಆಫೀಸ್​ನಲ್ಲಿ 600 ಕೋಟಿ ರೂ.ಗೆ ಅಧಿಕ ಕಲೆಕ್ಷನ್​ ಮಾಡಿ ದಾಖಲೆ ಬರೆದಿದೆ.

ಈ ಚಿತ್ರದಲ್ಲಿ ಪುಷ್ಪ ಪಾತ್ರಧಾರಿಯನ್ನು ರಕ್ತಚಂದನವನ್ನು ಕಳ್ಳಸಾಗಣೆ ಮಾಡುವ ಕೋಟ್ಯಾಧಿಪತಿಯಾಗಿ ತೋರಿಸಲಾಗಿದೆ. ಅಷ್ಟಕ್ಕೂ ಜಾಗತಿಕ ಮಾರುಕಟ್ಟೆಯಲ್ಲಿ ರಕ್ತಚಂದನ ಮರವು ನಿಜವಾಗಿಯೂ ಕೋಟಿ ರೂ.ಗೆ ಬೆಲೆ ಬಾಳುತ್ತದೆಯೇ? ಈ ಮರವನ್ನು ಏಕೆ ಖರೀದಿಸಲಾಗುತ್ತದೆ ಮತ್ತು ಯಾವುದಕ್ಕೆ ಬಳಸುತ್ತಾರೆ ಎಂಬ ಪ್ರಶ್ನೆಗಳಿಗೆ ನಾವೀಗ ಉತ್ತರ ಕಂಡಕೊಳ್ಳೋಣ.

ಬೆಲೆ ಎಷ್ಟು?

ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯಂತೆಯೇ ರಕ್ತಚಂದನದ ಬೆಲೆಯೂ ಗಣನೀಯವಾಗಿ ಬದಲಾಗುತ್ತಿರುತ್ತದೆ. ಇದರ ಸರಾಸರಿ ಬೆಲೆ ಭಾರತೀಯ ಕರೆನ್ಸಿಯಲ್ಲಿ ಪ್ರತಿ ಕೆಜಿಗೆ 50,000 ರಿಂದ 1,00,000 ರೂ. ವರೆಗೆ ಇರುತ್ತದೆ. ಇದಲ್ಲದೆ, ಉತ್ತಮ ಗುಣಮಟ್ಟದ ರಕ್ತಚಂದನದ ಬೆಲೆ ಕೆಜಿಗೆ 2,00,000 ರೂ. ವರೆಗೆ ಮಾರಾಟ ಮಾಡಬಹುದು. ಇಷ್ಟೊಂದು ಬೆಲೆ ಕೊಟ್ಟು ರಕ್ತಚಂದನವನ್ನು ಖರೀದಿಸಲು ನಾನಾ ಕಾರಣಗಳಿವೆ. ಇದು ಬಹಳ ಅಪರೂಪದ ಮರವಾಗಿದೆ. ಈ ಮರವನ್ನು ಕಡಿಯದಂತೆ ಸರ್ಕಾರ ಹಲವಾರು ನಿರ್ಬಂಧಗಳನ್ನು ವಿಧಿಸಿದೆ.

ರಕ್ತಚಂದನವನ್ನು ಯಾವುದಕ್ಕೆ ಬಳಸಲಾಗುತ್ತದೆ?

ಭಾರತದಲ್ಲಿ ಮಾತ್ರ ಕಂಡುಬರುವ ಈ ಮರವನ್ನು ಅತ್ಯಂತ ದುಬಾರಿ ಮತ್ತು ಅಪರೂಪದ ಮರವೆಂದು ಪರಿಗಣಿಸಲಾಗಿದೆ. ಈ ಮರಗಳು ಆಂಧ್ರಪ್ರದೇಶ, ತಮಿಳುನಾಡು ಮತ್ತು ಕರ್ನಾಟಕ ರಾಜ್ಯಗಳಲ್ಲಿ ಮಾತ್ರ ಬೆಳೆಯುತ್ತವೆ. ಉತ್ತಮ ಗುಣಮಟ್ಟದ ಪೀಠೋಪಕರಣಗಳು, ಪ್ರತಿಮೆಗಳು ಮತ್ತು ಅಲಂಕಾರಿಕ ವಸ್ತುಗಳ ಉತ್ಪಾದನೆಯಲ್ಲಿ ಈ ಮರವು ಪ್ರಮುಖ ಪಾತ್ರ ವಹಿಸುತ್ತದೆ.

ಇನ್ನು ರಕ್ತಚಂದನದಲ್ಲಿ ಉರಿಯೂತದ ನಿವಾರಣೆ ಗುಣವಿದೆ. ಉತ್ಕರ್ಷಣ ನಿರೋಧಕಗಳು ಹೇರಳವಾಗಿದ್ದು, ಸೋರಿಯಾಸಿಸ್, ಟ್ಯಾನ್ಡ್ ಸ್ಕಿನ್, ಎಣ್ಣೆಯುಕ್ತ ಚರ್ಮ, ಹೈಪರ್​ ಪಿಗ್ಮೆಂಟೇಶನ್, ಮೊಡವೆ ಮತ್ತು ಅಕಾಲಿಕ ವಯಸ್ಸಿನಂತಹ ಅನೇಕ ಚರ್ಮದ ಸಮಸ್ಯೆಗಳಿಗೆ ಚಿಕಿತ್ಸೆ ನೀಡಲು ಉಪಯುಕ್ತವಾಗಿದೆ. ಇದು ಬಹುತೇಕ ಎಲ್ಲ ಚರ್ಮದ ಸಮಸ್ಯೆಗಳಿಗೆ ಅತ್ಯುತ್ತಮವಾದ ಮೂಲಿಕೆಯಾಗಿದೆ. ಮರದಿಂದ ವಿವಿಧ ಸೌಂದರ್ಯವರ್ಧಕ ಉತ್ಪನ್ನಗಳನ್ನು ತಯಾರಿಸಲಾಗುತ್ತದೆ.

ರಕ್ತಚಂದನದ ಉತ್ಕರ್ಷಣ ನಿರೋಧಕ ಗುಣಲಕ್ಷಣಗಳು ಸ್ವತಂತ್ರ ರಾಡಿಕಲ್​ಗಳಿಂದ ಹೊಟ್ಟೆಯ ಜೀವಕೋಶಗಳಿಗೆ ಹಾನಿಯಾಗದಂತೆ ತಡೆಯಲು ಸಹಾಯ ಮಾಡುತ್ತದೆ, ಅಂದರೆ, ಹೊಟ್ಟೆಯ ಹುಣ್ಣುಗಳ ಅಪಾಯವನ್ನು ತಡೆಯುತ್ತದೆ. ಇದರಲ್ಲಿ ಸತು ಸಮೃದ್ಧವಾಗಿದೆ. ಅಲ್ಲದೆ, ತನ್ನ ಮಧುಮೇಹ ವಿರೋಧಿ ಪರಿಣಾಮದಿಂದಾಗಿ, ರಕ್ತಚಂದನವು ಇನ್ಸುಲಿನ್ ಸಂಶ್ಲೇಷಣೆ, ಸ್ರವಿಸುವಿಕೆ ಮತ್ತು ಶೇಖರಣೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ.

ರಕ್ತಚಂದನದಲ್ಲಿ ಮಾಡುವ ಆಭರಣಗಳು ಮತ್ತು ಲೈಂಗಿಕ ಉತ್ಪನ್ನಗಳು ಒತ್ತಡವನ್ನು ನಿವಾರಿಸಲು ಮತ್ತು ಸಂತಾನೋತ್ಪತ್ತಿ ಶಕ್ತಿಯನ್ನು ಹೆಚ್ಚಿಸಲು ಪರಿಣಾಮಕಾರಿ ಎಂದು ಪರಿಗಣಿಸಲಾಗಿದೆ. ಅಗಾಧವಾದ ಔಷಧೀಯ ಗುಣಗಳಿಂದಾಗಿ, ಇದು ವಿವಿಧ ಔಷಧೀಯ ಉತ್ಪನ್ನಗಳ ತಯಾರಿಕೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಅತಿ ಹೆಚ್ಚು ಬೇಡಿಕೆ ಹಾಗೂ ಅಪರೂಪದ ಮರ ಎಂಬ ಕಾರಣಕ್ಕೆ ಇದರ ಮೌಲ್ಯ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net