| ಗೋವಿಂದರಾಜು ಚಿನ್ನಕುರ್ಚಿ. ಬೆಂಗಳೂರು
ಸೈಬರ್ ವಂಚನೆಗೆ ಒಳಗಾದವರು ‘ಗೋಲ್ಡನ್ ಅವರ್’ನಲ್ಲಿ ಕರೆ ಮಾಡಿ ದೂರು ನೀಡಿದ ಪರಿಣಾಮ 3,431 ಕೋಟಿ ರೂ. ಸೇಫ್ ಆಗಿದೆ. ಜತೆಗೆ ಹಣ ಕಳೆದುಕೊಂಡವರ ಬ್ಯಾಂಕ್ ಖಾತೆಗೆ ವಾಪಸ್ ಕೂಡ ಜಮೆಯಾಗಿದೆ. ಹೌದು… ತಿಳಿದೋ ತಿಳಿಯದೋ ಸೈಬರ್ ಅಪರಾಧಕ್ಕೆ ಒಳಗಾದರೆ ‘ಗೋಲ್ಡನ್ ಅವರ್’ ಎನ್ನಲಾದ ಕೆಲ ನಿಮಿಷದಲ್ಲಿ ಕೇಂದ್ರ ಸರ್ಕಾರದ ಸೈಬರ್ ಹೆಲ್ಪ್ಲೈನ್ 1930ಕ್ಕೆ ಕರೆ ಮಾಡಿ ಸೂಕ್ತ ದಾಖಲೆ ಜತೆಗೆ ದೂರು ನೀಡಿದರೆ ನಿಮ್ಮ ಖಾತೆಯಿಂದ ಹಣ ವರ್ಗಾವಣೆ ಆಗಿರುವ ಖಾತೆ ಬ್ಲಾಕ್ ಆಗಲಿದೆ.
ಸ್ಥಳೀಯ ಪೊಲೀಸ್ ಠಾಣೆಗೆ 1930ಕ್ಕೆ ದೂರು ಸಲ್ಲಿಸಿದ ದೂರಿನ ನಂಬರ್ ಜತೆಗೆ ಹಣಕಾಸಿನ ವ್ಯವಹಾರದ ದಾಖಲೆ ಸಲ್ಲಿಸಿ ದೂರು ಸಲ್ಲಿಸಿದರೆ ಪ್ರಕರಣ ಆಗಲಿದೆ. ಆನಂತರ ಕೋರ್ಟ್ ಅನುಮತಿ ಪಡೆದು ದೂರುದಾರನ ಬ್ಯಾಂಕ್ ಖಾತೆಗೆ ನೇರ ಹಣ ಬರಲಿದೆ. ಸೈಬರ್ ಹೆಲ್ಪ್ಲೈನ್ 1930 ನಂಬರ್ ಚಾಲ್ತಿಗೊಂಡು ಮೂರು ವರ್ಷ ಕಳೆದಿದೆ. 9.94 ಲಕ್ಷ ಮಂದಿ ಕರೆ ಮಾಡಿ ದೂರು ಸಲ್ಲಿಸಿದ್ದಾರೆ. ಆದರೆ, ಸೈಬರ್ ಕ್ರೖೆಂ ಪ್ರಕರಣಕ್ಕೆ ಹೋಲಿಕೆ ಮಾಡಿದರೆ 1930ಕ್ಕೆ ಕರೆ ಮಾಡುವವರ ಸಂಖ್ಯೆ ತೀರಾ ಕಡಿಮೆ ಇದೆ.
ಕೆಲವೊಂದು ವೇಳೆ ಫೇಸ್ಬುಕ್, ಎಕ್ಸ್, ಇನ್ಸ್ಟಾ ಗ್ರಾಮ್ ಸೇರಿ ಜಾಲತಾಣದ ಜಾಹೀರಾತು ನೋಡಿ ಇತ್ತೀಚೆಗೆ ಟ್ರೇಡಿಂಗ್ ವ್ಯವಹಾರ ಮತ್ತು ಡಿಜಿಟಲ್ ಅರೆಸ್ಟ್ಗೆ ಒಳಗಾಗಿ ಕೋಟ್ಯಂತರ ರೂ. ಹಾಕುತ್ತಿದ್ದಾರೆ. ಹೂಡಿಕೆಯಿಂದ ವಂಚನೆಗೆ ಒಳಗಾಗಿರುವುದು ತಿಳಿಯುವಷ್ಟರಲ್ಲಿ ತಿಂಗಳುಗಳೇ ಕಳೆದು ಹೋಗಿರುತ್ತದೆ. ಆ ಸಮಯದಲ್ಲಿ 1930ಕ್ಕೆ ಕರೆ ಮಾಡಿದರೆ ಪ್ರಯೋಜನ ಬರುವುದಿಲ್ಲ.
ಅಷ್ಟರಲ್ಲಿ ಸೈಬರ್ ವಂಚಕರು ಬೇರೆ ಬೇರೆ ಖಾತೆಗಳಿಗೆ ವರ್ಗಾವಣೆ ಮಾಡಿಕೊಂಡು ಡ್ರಾ ಮಾಡಿರುತ್ತಾರೆ ಅಥವಾ ಕ್ರಿಫ್ಟೋ ಕರೆನ್ಸಿಗೆ ಬದಲಿಸಿಕೊಂಡು ಲಪಟಾಯಿಸುತ್ತಾರೆ. ಇಂತಹ ಸಂದರ್ಭದಲ್ಲಿ ಸೈಬರ್ ವಂಚಕರ ಬ್ಯಾಂಕ್ ಖಾತೆ ಜಪ್ತಿ ಮಾಡಿದರೂ ಹಣ ಸಿಗುವುದಿಲ್ಲ. ಆಗಂತ ಸಹಾಯವಾಣಿ 1930ಗೆ ಕರೆ ಮಾಡದಿರುವುದು ತಪ್ಪಾಗಲಿದೆ ಎಂದು ಸೈಬರ್ ತಜ್ಞರ ಸಲಹೆಯಾಗಿದೆ.
500 ರೂ. ಪೆಟ್ರೋಲ್ ಹಾಕಿಸಿದ ಚಾಲಕನಿಗೆ ಕಾದಿತ್ತು ಅಚ್ಚರಿ! ಇಂಧನ ಬಿಲ್ ನೋಡಿ ಕಕ್ಕಾಬಿಕ್ಕಿ | Petrol