ಮದುವೆ ಕಥೆನಾ? ಪ್ರೇಮಕಥೆನಾ? ಕುತೂಹಲ ಮೂಡಿಸಿದೆ ದಿವ್ಯಾ ಉರುಡುಗ ವೈರಲ್ ವಿಡಿಯೋ

Divya Uruduga (5)
Published on

ವಿಜಯವಾಣಿ ಸುದ್ದಿಜಾಲ ಬೆಂಗಳೂರು:

ಬಿಗ್‌ಬಾಸ್ ಸೀಸನ್ 8ರಲ್ಲಿ ಪ್ರಾರಂಭವಾದ ನಟಿ ದಿವ್ಯಾ ಉರುಡುಗ ಮತ್ತು ಬೈಕ್ ರೇಸರ್ ಅರವಿಂದ್ ಪ್ರೇಮಕಥೆಗೆ ಮದುವೆಯ ಹಂತಕ್ಕೆ ಬಂದಿದೆಯಾ? ಇತ್ತೀಚೆಗಷ್ಟೆ ಜಾಲತಾಣದಲ್ಲಿ ದಿವ್ಯಾ ಶೇರ್ ಮಾಡಿಕೊಂಡಿರುವ ವಿಡಿಯೋ ಆ ಪ್ರಶ್ನೆ ಮೂಡಿಸಿದೆ. ಅದರಲ್ಲಿ ‘ಯಾವಾಗ? ಯಾವಾಗ ಅನ್ನೋ ಈ ಪ್ರಶ್ನೆಗೆ ಉತ್ತರ ರೆಡಿಯಾಗುತ್ತಿದೆ. ಎಷ್ಟೋ ದಿನಗಳ ಕನಸು ಈಗ ನನಸಾಗುವ ಸಮಯ ಬಂದಿದೆ. ನನ್ನಷ್ಟೇ ಕಾತುರ ನಿಮ್ಮಲ್ಲೂ ಇದೆ ಅಂತ ನನಗೂ ಗೊತ್ತು’ ಎಂದು ರೇಷ್ಮೆ ಸೀರೆ, ಮಲ್ಲಿಗೆ ಹೂ ತೊಟ್ಟು ಫೋಟೋಶೂಟ್‌ಗೆ ರೆಡಿಯಾಗುತ್ತಿರುವ ದಿವ್ಯಾ ಹೇಳಿಕೊಂಡಿದ್ದಾರೆ.

ಈ ಬಗ್ಗೆ ‘ಅರ್ಧಂಬರ್ಧ ಪ್ರೇಮಕಥೆ’ ಪೂರ್ತಿಯಾಯಿತೇ? ಎಂದು ಪ್ರಶ್ನಿಸಿದರೆ, ನಗುವ ದಿವ್ಯಾ ‘ಯಾವ ವಿಷಯದ ಬಗ್ಗೆ ಅಂತ ಇಷ್ಟರಲ್ಲೇ ಘೋಷಣೆ ಮಾಡಲಿದ್ದೇನೆ. ಆದರೆ, ಅಲ್ಲೀವರೆಗೂ ಕುತೂಹಲ ಇರಲಿ’ ಎಂದು ಹೇಳಿಕೊಳ್ಳುತ್ತಾರೆ.

ಅಲ್ಲಿ ಬಿಡುಗಡೆ, ಇಲ್ಲಿ ‘ಬಂಧ’ನ!
ಅರವಿಂದ್ ಕೌಶಿಕ್ ನಿರ್ದೇಶನದ ‘ಅರ್ಧಂಬರ್ಧ ಪ್ರೇಮಕಥೆ’ ಚಿತ್ರದಲ್ಲಿ ಅರವಿಂದ್ ಮತ್ತು ದಿವ್ಯಾ ನಾಯಕ, ನಾಯಕಿಯಾಗಿ ನಟಿಸಿದ್ದಾರೆ. ‘ಹುಲಿರಾಯ’, ‘ಗಿರ್ಕಿ’ ಸೇರಿ ದಿವ್ಯಾ ಈಗಾಗಲೇ ಕೆಲವು ಚಿತ್ರಗಳಲ್ಲಿ ಅಭಿನಯಿಸಿದ್ದು, ಅರವಿಂದ್‌ಗೆ ಇದು ಮೊದಲ ಸಿನಿಮಾ. ಸದ್ಯ ಸಿನಿಮಾ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದ್ದು, ರಿಲೀಸ್‌ಗೆ ರೆಡಿಯಾಗಿದೆ. ಹೀಗಾಗಿಯೇ ಒಂದೆಡೆ ದಿವ್ಯಾ ಮತ್ತು ಅರವಿಂದ್ ಮದುವೆಯ ಬಂಧಕ್ಕೆ ಸಿದ್ಧರಾಗುತ್ತಿದ್ದು ಮತ್ತೊಂದೆಡೆ ‘ಅರ್ಧಂಬರ್ಧ ಪ್ರೇಮಕಥೆ’ ಬಿಡುಗಡೆಯಾಗಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಅಂದಹಾಗೆ ಚಿತ್ರದಲ್ಲಿ ರ್ಯಾಪರ್​ ಆಲ್‌ಓಕೆ, ಶ್ರೇಯಾ, ವೆಂಕಟ್ ಶಾಸಿ, ಪ್ರದೀಪ್, ಸೂರಜ್, ಸುಜಿತ್ ಪ್ರಮುಖ ತಾರಾಗಣದಲ್ಲಿದ್ದಾರೆ. ಚಿತ್ರಕ್ಕೆ ಅರ್ಜುನ್ ಜನ್ಯಾ ಸಂಗೀತ, ಶಿವರಾಜ್ ಸಂಕಲನವಿರಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net