ನಾನು ಮರಣಶಯ್ಯೆಯಲ್ಲಿದ್ದೇನೆ ... ಸಾಯುವ 15 ಗಂಟೆ ಮುನ್ನ ಪೋಸ್ಟ್​ ಮಾಡಿದ್ದ ದಿವ್ಯಾ

Divya Chouksey - Final
Published on

ಕಳೆದ ಕೆಲವು ತಿಂಗಳುಗಳಲ್ಲಿ ಬಾಲಿವುಡ್​ನಲ್ಲಿ ಹಿರಿಯ ನಟ ರಿಷಿ ಕಪೂರ್​ ಮತ್ತು ಇರ್ಫಾನ್​ ಖಾನ್​ ಇಬ್ಬರೂ ಕ್ಯಾನ್ಸರ್​ನಿಂದ ನಿಧನರಾಗಿದ್ದರು. ಈಗ ದಿವ್ಯಾ ಚೋಕ್ಸೆ (29) ಎಂಬ ಬಾಲಿವುಡ್​ ನಟಿ ಭಾನುವಾರ ಕ್ಯಾನ್ಸರ್​ನಿಂದ ನಿಧನರಾಗಿದ್ದಾರೆ.

ದಿವ್ಯಾ ಸಾವು ಹೆಚ್ಚು ಸುದ್ದಿಯಾಗಿಲ್ಲ. ಏಕೆಂದರೆ, ಅವರ ಬಗ್ಗೆ ಹೆಚ್ಚು ಜನರಿಗೆ ಗೊತ್ತಿರಲಿಲ್ಲ. ಇತ್ತೀಚಿನ ಕೆಲವು ವರ್ಷಗಳಲ್ಲಿ ನಟಿಯಾಗಿ ಗುರುತಿಸಿಕೊಂಡಿದ್ದ ಅವರು, 2016ರಲ್ಲಿ ಬಿಡುಗಡೆಯಾದ 'ಹೇ ದಿಲ್​ ತೋ ಅಪ್ನಾ ಆವಾರಾ' ಎಂಬ ಸಿನಿಮಾದಲ್ಲಿ ನಟಿಸಿದ್ದರು. ಅದರ ಜತೆಗೆ 'ಎಂಟಿವಿ ಮೇಕಿಂಗ್​' ಮತ್ತು 'ಎಂಟಿವಿ ಟ್ರೂಲೈಫ್​' ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಿದ್ದರು. ಜತೆಗೆ ಮಾಡಲ್​ ಆಗಿಯೂ ಗುರುತಿಸಿಕೊಂಡಿದ್ದರು.

ಇಂಥಾ ದಿವ್ಯಾ ಭಾನುವಾರ ಸದ್ದಿಲ್ಲದೆ ಇನ್ನಿಲ್ಲವಾಗಿದ್ದಾರೆ. ಕಳೆದ ಒಂದೂವರೆ ವರ್ಷಗಳಿಂದ ಕ್ಯಾನ್ಸರ್​ನಿಂದ ಬಳಲುತ್ತಿದ್ದ ದಿವ್ಯಾ, ಆರು ತಿಂಗಳ ಹಿಂದೆ ಚೇತರಿಸಿಕೊಂಡಿದ್ದರು. ಇನ್ನು ಮತ್ತೆ ನಟನೆಯತ್ತ ಹೆಜ್ಜೆ ಹಾಕಬೇಕು ಎನ್ನುವಷ್ಟರಲ್ಲಿ ಅವರಿಗೆ ಕ್ಯಾನ್ಸರ್​ ಮತ್ತೆ ಕಾಡಿದೆ. ಕೊನೆಗೆ ಭಾನುವಾರ, ಅವರು ಭೋಪಾಲ್​ನ ತಮ್ಮ ಮನೆಯಲ್ಲಿ ನಿಧನರಾಗಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಕ್ಯಾನ್ಸರ್​ನಿಂದ ಸುಸ್ತಾಗಿದ್ದ ದಿವ್ಯಾ, ಸಾಯುವ ಹಿಂದಿನ ದಿನವೇ, ತಾನು ಮರಣಶಯ್ಯೆಯಲ್ಲಿದ್ದೇನೆ ಎಂದು ಸೋಷಿಯಲ್​ ಮೀಡಿಯಾದಲ್ಲಿ ಮೆಸೇಜ್​ ಪೋಸ್ಟ್​ ಮಾಡಿದ್ದರು. ದಿವ್ಯಾಗೆ ತಾನು ಸಾಯುತ್ತಿದ್ದೇನೆ ಎಂಬ ಮುನ್ಸೂಚನೆ ಸಿಕ್ಕಿತ್ತೇನೋ ಗೊತ್ತಿಲ್ಲ. ಆದರೆ, ಸಾಯುವ 15 ಗಂಟೆ ಮುಂಚೆಯೇ ತಾವು ಮರಣಶಯ್ಯೆಯಲ್ಲಿರುವುದಾಗಿ ಅವರು ಬರೆದುಕೊಂಡಿದ್ದರು.

ಅದಾಗಿ 15 ಗಂಟೆಯ ನಂತರ ದಿವ್ಯಾ ಪ್ರಾಣ ಬಿಟ್ಟಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net