ಜೈ ಜವಾನ್​ ಜೈ ಕಿಸಾನ್​ ಎಂದು ಕೃಷಿಯಲ್ಲಿ ತೊಡಗಿಸಿಕೊಂಡ ಸಲ್ಮಾನ್​

Salman Khan - Final
Published on

ಸಿನಿಮಾ ಸೆಲೆಬ್ರಿಟಿಗಳು ಕೃಷಿಯತ್ತ ಆಕರ್ಷಿತರಾಗಿ ಕೃಷಿಯಲ್ಲಿ ತೊಡಗಿಸಿಕೊಳ್ಳುವುದು ಹೊಸ ವಿಷಯವೇನಲ್ಲ. ಇತ್ತೀಚೆಗಷ್ಟೇ 'ರಿಯಲ್​ ಸ್ಟಾರ್' ಉಪೇಂದ್ರ, ತಮ್ಮ ತೋಟದ ಮನೆಯಲ್ಲಿ ಬದನೆಕಾಯಿ, ಸೌತೆಕಾಯಿ ಸೇರಿದಂತೆ ಕೆಲವು ತರಕಾರಿಗಳನ್ನು ಬೆಳೆದಿದ್ದರು.

ಇದೀಗ ಬಾಲಿವುಡ್​ ಸ್ಟಾರ್ ಸಲ್ಮಾನ್​ ಖಾನ್​ ಸಹ ಅದೇ ಹಾದಿ ತುಳಿದಿದ್ದಾರೆ. ಲಾಕ್​ಡೌನ್​ ಶುರುವಾದಾಗಿನಿಂದಲೂ ಪನ್ವೇಲ್​ನ ತಮ್ಮ ಫಾರ್ಮ್​ ಹೌಸ್​ನಲ್ಲಿ ಬೀಡುಬಿಟ್ಟಿರುವ ಸಲ್ಮಾನ್, ಇದೀಗ ಗದ್ದೆಯಲ್ಲಿ ಕೆಲಸ ಮಾಡುವ ಫೋಟೋವೊಂದನ್ನು ಸೋಷಿಯಲ್​ ಮೀಡಿಯಾದಲ್ಲಿ ಶೇರ್​ ಮಾಡಿದ್ದಾರೆ.

ಈ ಫೋಟೋಗೆ, 'ಜೈ ಜವಾನ್​ ಜೈ ಕಿಸಾನ್​' ಎಂಬ ಕ್ಯಾಪ್ಶನ್​ ನೀಡಿರುವ ಅವರು, ಈ ಮೂಲಕ ತಾವು ಕೃಷಿಯಲ್ಲಿ ತೊಡಗಿಸಿಕೊಂಡಿರುವುದಾಗಿ ಸೂಚಿಸಿದ್ದಾರೆ. 'ಪ್ರತಿ ಅನ್ನದ ಮೇಲೂ ತಿನ್ನುವವನ ಹೆಸರು ಬರೆದಿರುತ್ತದೆ. ಜೈ ಜವಾನ್​ ಜೈ ಕಿಸಾನ್​' ಎಂದು ಸಲ್ಮಾನ್​ ಟ್ವೀಟ್​ ಮಾಡಿದ್ದಾರೆ.

ಇದಕ್ಕೂ ಮುನ್ನ, ಹಲವು ಎಕರೆಗಳ ತಮ್ಮ ತೋಟವನ್ನು ಸಲ್ಮಾನ್​, ತಮ್ಮ ಕುಟುಂಬದವರು ಮತ್ತು ಮನೆಯವರ ಜತೆಗೆ ಕ್ಲೀನ್​ ಮಾಡಿದ್ದಾರೆ. ಸ್ವತಃ ಸಲ್ಮಾನ್​ ಪೊರಕೆ ಹಿಡಿದು ಕಸ ಗುಡಿಸುವ ಅಪರೂಪದ ವಿಡಿಯೋವೊಂದನ್ನು ಅವರು ತಮ್ಮ ಇನ್​ಸ್ಟಾಗ್ರಾಂ ಮೂಲಕ ವಿಶ್ವ ಪರಿಸರ ದಿನದ ಅಂಗವಾಗಿ ಶೇರ್​ ಮಾಡಿಕೊಂಡಿದ್ದರು.

ಲಾಕ್​ಡೌನ್​ ಜಾರಿಗೆ ಬಂದಾಗಿನಿಂದಲೂ, ಸಲ್ಮಾನ್​ ತಮ್ಮ ಸ್ನೇಹಿತರು ಮತ್ತು ಒಂದಿಷ್ಟು ಕುಟುಂಬದವರೊಂದಿಗೆ ಫಾರ್ಮ್​ ಹೌಸ್​ ಸೇರಿಕೊಂಡಿದ್ದರು. ನಟಿ ಜಾಕ್ವೆಲಿನ್​ ಫರ್ನಾಂಡಿಸ್​ ಜತೆಗೆ ಅಲ್ಲೇ ಒಂದು ವಿಡಿಯೋ ಸಾಂಗ್​ ಸಹ ಶೂಟ್​ ಮಾಡಿದ್ದರು. ಅಷ್ಟೇ ಅಲ್ಲ, ಅಲ್ಲೇ ಒಂದು ಅಪರೂಪದ ಸಂದರ್ಶನ ಸಹ ಕೊಟ್ಟಿದ್ದರು.

ಈ ಮಧ್ಯೆ, 'ರಾಧೇ' ಚಿತ್ರದ ಬಾಕಿ ಇರುವ ಚಿತ್ರೀಕರಣವನ್ನು ಸಲ್ಮಾನ್​ ಸದ್ಯದಲ್ಲೇ ಮುಗಿಸಲಿದ್ದು, ಅದಕ್ಕಾಗಿ ಮುಂಬೈನ ಒಂದು ಸ್ಟುಡಿಯೋ ಬುಕ್​ ಮಾಡಿದ್ದಾರೆ. ಸದ್ಯದಲ್ಲೇ ಚಿತ್ರೀಕರಣ ಸಹ ಪ್ರಾರಂಭವಾಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net