ಪ್ರಾರಂಭಕ್ಕೂ ಮುನ್ನವೇ ಧ್ರುವ ಸರ್ಜಾ ಚಿತ್ರದ ವಿತರಣೆ ಹಕ್ಕುಗಳು ಮಾರಾಟ

KD (2)
Published on

ಬೆಂಗಳೂರು: ಧ್ರುವ ಸರ್ಜಾ ಅಭಿನಯದ, ಪ್ರೇಮ್​ ನಿರ್ದೇಶನದ ಹೊಸ ಚಿತ್ರದ ಟೈಟಲ್​ ಬಿಡುಗಡೆ ಇತ್ತೀಚೆಗಷ್ಟೇ ಮುಗಿದಿದೆ. ಚಿತ್ರಕ್ಕೆ 'ಕೆಡಿ - ದಿ ಡೆವಿಲ್​' ಎಂಬ ಹೆಸರನ್ನು ಇಡಲಾಗಿದ್ದು, ಈಗಾಗಲೇ ಟೈಟಲ್​ ಟೀಸರ್​ ಸಹ ಬಿಡುಗಡೆಯಾಗಿ ಎಲ್ಲಾ ಭಾಷೆಗಳಿಂದಲೂ 40ಕ್ಕೂ ಹೆಚ್ಚು ಮಿಲಿಯನ್​ ವೀಕ್ಷಣೆಯನ್ನು ಕಂಡಿದೆ.

'ಕೆಡಿ' ಚಿತ್ರದ ಚಿತ್ರೀಕರಣವೇ ಇನ್ನೂ ಆಗಿಲ್ಲ, ಆಗಲೇ ಚಿತ್ರದ ಎಲ್ಲಾ ಭಾಷೆಗಳ ವಿತರಣೆಯ ಹಕ್ಕುಗಳು ಮಾರಾಟವಾಗಿರುವುದು ವಿಶೇಷ. ಚಿತ್ರದ ಕನ್ನಡ ಅವತರಣಿಕೆಯ ವಿತರಣೆಯ ಜವಾಬ್ದಾರಿಯನ್ನು ಕೆವಿಎನ್​ ಪ್ರೊಡಕ್ಷನ್ಸ್​ ಸಂಸ್ಥೆಯೇ ವಹಿಸಿಕೊಳ್ಳಲಿದೆ. ಇನ್ನು, ತೆಲುಗು ಹಕ್ಕುಗಳನ್ನು ವಾರಾಹಿ ಚಲನಚಿತ್ರಂ ಸಂಸ್ಥೆಯು ಪಡೆದುಕೊಂಡಿದೆ. ತಮಿಳಿನ ಅವತರಣಿಕೆಯ ಹಕ್ಕುಗಳನ್ನು ಉದಯನಿಧಿ ಸ್ಟಾಲಿನ್​ ಅವರ ರೆಡ್​ ಜಯಂಟ್​ ಮೂವೀಸ್​ ಪಡೆದುಕೊಂಡರೆ, ಮಲಯಾಳಂ ಅವತರಣಿಕೆಯ ಹಕ್ಕುಗಳನ್ನು ಮೋಹನ್​ ಲಾಲ್​ ಅವರ ಆರ್ಶೀರ್ವಾದ್​ ಸಿನಿಮಾಸ್​ ಪಡೆದಿದೆ.

ಇನ್ನು, ಹಿಂದಿಯ ಹಕ್ಕುಗಳನ್ನು ಎಎ ಫಿಲಂಸ್​ನ ಅನಿಲ್​ ಥಡಾನಿ ಪಡೆದಿದ್ದು, ಉತ್ತರ ಭಾರತದಲ್ಲಿ ಚಿತ್ರವನ್ನು ಬಿಡುಗಡೆ ಮಾಡಲಿದ್ದಾರೆ. ಈ ಪೈಕಿ ಅನಿಲ್​ ಥಡಾನಿ ಮತ್ತು ಸಾಯಿ ಕೊರ್ರಪಾಟಿ ಇತ್ತೀಚೆಗೆ ನಡೆದ ಟೈಟಲ್​ ಬಿಡುಗಡೆ ಸಮಾರಂಭದಲ್ಲಿ ಹಾಜರಿದ್ದು ಚಿತ್ರತಂಡಕ್ಕೆ ಶುಭ ಕೋರಿದ್ದಾರೆ.

'ಕೆಡಿ - ದಿ ಡೆವಿಲ್​' ಚಿತ್ರದ ಮುಹೂರ್ತ ಏ. 24ರಂದು ಮೈಸೂರಿನ ಚಾಮುಂಡಿ ಬೆಟ್ಟದಲ್ಲಿರುವ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ನಡೆಯಿತು. ಆದರೆ, ಧ್ರುವ ಸರ್ಜಾ ಅಭಿನಯದ 'ಮಾರ್ಟಿನ್​' ಚಿತ್ರದ ಚಿತ್ರೀಕರಣ ಮುಗಿದಿಲ್ಲವಾದ್ದರಿಂದ, ಚಿತ್ರೀಕರಣ ಇನ್ನೂ ಪ್ರಾರಂಭವಾಗಿಲ್ಲ. 'ಮಾರ್ಟಿನ್​' ಚಿತ್ರದ ಕೊನೆಯ ಹಂತದ ಚಿತ್ರೀಕರಣ ಸದ್ಯದಲ್ಲೇ ಪ್ರಾರಂಭವಾಗಲಿದ್ದು, ನವೆಂಬರ್​ ಅಂತ್ಯಕ್ಕೆ ಮುಕ್ತಾಯವಾಗುವ ನಿರೀಕ್ಷೆ ಇದೆ. ಹೊಸ ವರ್ಷದಲ್ಲಿ 'ಕೆಡಿ' ಚಿತ್ರ ಪ್ರಾರಂಭವಾಗಲಿದೆ.

ಇನ್ನು, 'ಕೆಡಿ - ದಿ ಡೆವಿಲ್​' ಚಿತ್ರವನ್ನು ಕೆವಿಎನ್​ ಪ್ರೊಡಕ್ಷನ್ಸ್​ನಡಿ ನಿಶಾ ವೆಂಕಟ್​ ಕೋನಾಂಕಿ ನಿರ್ಮಾಣ ಮಾಡುತ್ತಿದ್ದು, ವಿಲಿಯಂ ಡೇವಿಡ್​ ಛಾಯಾಗ್ರಹಣ ಮತ್ತು ಅರ್ಜುನ್​ ಜನ್ಯ ಸಂಗೀತವಿದೆ. ಧ್ರುವ ಜತೆಗೆ ಬಾಲಿವುಡ್​ ನಟ ಸಂಜಯ್​ ದತ್​ ಸಹ ಈ ಚಿತ್ರದಲ್ಲಿ ಒಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net