ವೇದಿಕೆ ಮೇಲೆ ಕಣ್ಣೀರು ಸುರಿಸಿದ ಕೆ. ಮಂಜು ಮಗ ಶ್ರೇಯಸ್​!

Raana - Shreyas Manju
Published on

ಬೆಂಗಳೂರು: ಹಿರಿಯ ನಿರ್ಮಾಪಕ ಕೆ.ಮಂಜು ಪುತ್ರ ಶ್ರೇಯಸ್ ನಾಯಕನಾಗಿ ನಟಿಸಿರುವ ಎರಡನೇ ಚಿತ್ರ 'ರಾಣ'ದ ಟ್ರೇಲರ್​ ಬಿಡುಗಡೆಯಾಗಿದೆ. ಇಂದು ಬೆಳಿಗ್ಗೆ ಯೂಟ್ಯೂಬ್​ನ ಆನಂದ್​ ಆಡಿಯೋ ಚಾನಲ್​ನಲ್ಲಿ ಟ್ರೇಲರ್​ ಬಿಡುಗಡೆಯಾಗಿದ್ದರೂ, ಭಾನುವಾರ ರಾತ್ರಿಯೇ ಧ್ರುವ ಸರ್ಜಾ ಅವರಿಂದ ಈ ಟ್ರೇಲರ್​ ಬಿಡುಗಡೆಯಾಗಿತ್ತು.

ಕಲಾವಿದರ ಸಂಘದ ಆಡಿಟೋರಿಯಂನಲ್ಲಿ ನಡೆದ ಈ ಟ್ರೇಲರ್​ ಬಿಡುಗಡೆ ಸಮಾರಂಭದಲ್ಲಿ ಧ್ರುವ ಜತೆಗೆ ರವಿಚಂದ್ರನ್​ ಅವರ ಮಗ ವಿಕ್ರಮ್​ ರವಿಚಂದ್ರನ್​ ಸಹ ಇದ್ದರು. ಎಲ್ಲರ ಸಮ್ಮುಖದಲ್ಲಿ ಟ್ರೇಲರ್​ ಬಿಡುಗಡೆಯಾಯಿತು. ಈ ಸಂದರ್ಭದಲ್ಲಿ ಶ್ರೇಯಸ್​ ಎಮೋಷನಲ್​ ಆಗಿದ್ದಷ್ಟೇ ಅಲ್ಲ, ವೇದಿಕೆಯ ಮೇಲೆಯೇ ಕಣ್ಣೀರು ಹಾಕಿದರು.

''ರಾಣ' ಚಿತ್ರವು ನವೆಂಬರ್​ 11ರಂದು ಬಿಡುಗಡೆಯಾಗುತ್ತಿದೆ. ಇದು ನನ್ನ ಎರಡನೆಯ ಚಿತ್ರ. ಪಡ್ಡೆಹುಲಿ ಬಿಡುಗಡೆಯಾಗಿ ಸುಮಾರು ಮೂರೂವರೆ ವರ್ಷಗಳ ನಂತರ ನನ್ನ ಚಿತ್ರವೊಂದು ಬಿಡುಗಡೆಯಅಗುತ್ತಿದೆ. ನನ್ನ ಪ್ರತಿಭೆಯನ್ನು ಎಲ್ಲರಿಗೂ ತೋರಿಸಬೇಕೆಂದು ಅದೆಷ್ಟು ದಿನಗಳ ಕಾಲ ಕಾದಿದ್ದೇನೋ? ಅದೆಷ್ಟು ದಿನ ಅತ್ತಿದ್ದೇನೋ? ನನಗೊಬ್ಬನಿಗೆ ಗೊತ್ತು. ಆದರೆ, ಏನೇ ಮಾಡಿದರೂ, ನನ್ನ ಬೆಸ್ಟ್​ ಕೊಟ್ಟಿದ್ದೇನೆ' ಎಂದು ವೇದಿಕೆ ಮೇಲೆ ಕಣ್ಣೀರು ಹಾಕಿದರು.

'ನನಗೆ ಸಿನಿಮಾ ಎಂದರೆ ಪ್ರಾಣ. ಈ ಟ್ರೇಲರ್​ ತೋರಿಸಬೇಕೆಂದು ಬಹಳ ದಿನಗಳಿಂದ ಕಾಯುತ್ತಿದ್ದೆ. ಈ ಚಿತ್ರ ನಿಮಗೆ ಇಷ್ಟವಾಗುತ್ತದೆ ಎಂದು ನಂಬಿದ್ದೀನಿ. ನನ್ನ ಶಕ್ತಿಮೀರಿ ಸಿನಿಮಾಗೆ ಮಾಡಿದ್ದೀನಿ. ನಾನು ಅತ್ತಿದ್ದು ಸಂತೋಷದಿಂದಲೇ ಹೊರತು, ದುಃಖದಿಂದಲ್ಲ' ಎಂದು ಶ್ರೇಯಸ್​ ಹೇಳಿದರು.

'ರಾಣ' ಚಿತ್ರದಲ್ಲಿ ಶ್ರೇಯಸ್​ಗೆ ನಾಯಕಿಯಾಗಿ ರೀಷ್ಮಾ ನಾಣಯ್ಯ ನಟಿಸಿದ್ದು, ನಂದಕಿಶೋರ್​ ನಿರ್ದೇಶನ ಮಾಡಿದ್ದಾರೆ. ಚಂದನ್​ ಶೆಟ್ಟಿ ಸಂಗೀತ ಸಂಯೋಜಿಸಿರುವ ಈ ಚಿತ್ರವನ್ನು ಗುಜ್ಜಲ್​ ಪುರುಷೋತ್ತಮ್​ ನಿರ್ಮಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net