ಅಮಿತಾಭ್ ಕಾಲಿಗೆ ಪೆಟ್ಟು; 80 ವರ್ಷದ ಬಿಗ್​ಬಿ ಧೈರ್ಯಕ್ಕೆ ಅಭಿಮಾನಿಗಳ ಮೆಚ್ಚುಗೆ

Amitabh
Published on

ಬಿಗ್​ಬಿ ಅಮಿತಾಭ್ ಬಚ್ಚನ್. ಬಾಲಿವುಡ್​ನ ಮೆಗಾಸ್ಟಾರ್. ಐದೂವರೆ ದಶಕಗಳ ಸುದೀರ್ಘ ಸಿನಿಜೀವನದಲ್ಲಿ ನೂರಾರು ಚಿತ್ರಗಳಲ್ಲಿ ನಟಿಸಿದ್ದಾರೆ. ಇಂತಹ ಬಿಗ್​ಬಿ ನಟನೆಯಿಂದ ಮಾತ್ರವಲ್ಲ ಚಿತ್ರೀಕರಣದ ವೇಳೆ ಶಿಸ್ತಿನಿಂದಲೂ ಚಿತ್ರರಂಗಕ್ಕೆ ಮಾದರಿಯಾಗಿದ್ದಾರೆ. ಈ ವರ್ಷ 80ನೇ ವಸಂತಕ್ಕೆ ಕಾಲಿಟ್ಟಿರುವ ಅವರು, ಈ ಇಳಿ ವಯಸ್ಸಿನಲ್ಲೂ ಅದೇ ಶಿಸ್ತನ್ನು ಮುಂದುವರಿಸಿದ್ದಾರೆ. ಇತ್ತೀಚೆಗಷ್ಟೇ ಬಿಗ್​ಬಿ, ಸಾಮಾಜಿಕ ಜಾಲತಾಣದಲ್ಲಿ ಕಾಲಿಗೆ ಬ್ಯಾಂಡೇಜ್ ಧರಿಸಿ ಓಡುತ್ತಿರುವ ಫೋಟೋ ಹಂಚಿಕೊಂಡಿದ್ದರು. ಆಗ ಅಭಿಮಾನಿಗಳು ‘ನಿಮ್ಮ ಕಾಲಿಗೇನಾಯಿತು?’, ‘ಬ್ಯಾಂಡೇಜ್ ಏಕೆ ಧರಿಸಿದ್ದೀರಿ?’ ಎಂದು ಪ್ರಶ್ನಿಸಿದರು. ಅವರಿಗೆ ಭಾನುವಾರ ಸುದೀರ್ಘ ಪತ್ರದ ಮೂಲಕ ಅಮಿತಾಭ್ ಉತ್ತರಿಸಿದ್ದಾರೆ.

‘ಕಬ್ಬಿಣದ ತುಂಡೊಂದು ಕಾಲಿಗೆ ತಾಕಿ, ರಕ್ತ ಚಿಮ್ಮಿತು. ನೋಡಿಕೊಂಡರೆ ಗಾಯವಾದ ಜಾಗದಲ್ಲಿ ನರವೂ ಕತ್ತರಿಸಿಹೋಗಿತ್ತು. ತಕ್ಷಣ ವೈದ್ಯರನ್ನು ಕರೆಸಿಕೊಂಡು, ಆಪರೇಷನ್ ಥಿಯೇಟರ್​ಗೆ ಹೋಗಿ ಸ್ಟಿಚಸ್ ಹಾಕಿಸಿಕೊಂಡೆ. ‘ಕೌನ್ ಬನೇಗಾ ಕರೋಡ್​ಪತಿ’ ಕಾರ್ಯಕ್ರಮದಲ್ಲಿ ಪ್ರತಿ ಸಂಚಿಕೆಗೂ ಮೂರ್ನಾಲ್ಕು ತಾಸು ಒಂದೇ ಕಡೆ ಕುಳಿತಿರಬೇಕು. ಹೆಚ್ಚು ನಡೆದಾಡದಂತೆ, ಕಾಲಿಗೆ ರೆಸ್ಟ್ ನೀಡಲು ವೈದ್ಯರು ಹೇಳಿದ್ದರು. ಕೆಲವೊಮ್ಮೆ ನಾವು ತೆಗೆದುಕೊಳ್ಳುವ ರಿಸ್ಕ್ ನಮಗೆ ಖುಷಿ ನೀಡಬಹುದು ಅಥವಾ ದುಃಖ ನೀಡಬಹುದು. ಆದರೆ ಆ ರಿಸ್ಕ್​ಗಳು ಶಾಶ್ವತವಲ್ಲ. ಅವು ಅತಿ ವೇಗವಾಗಿ ಕಣ್ಮರೆಯಾಗಿಬಿಡುತ್ತವೆ ಅಥವಾ ಅಳಿಸಲಾಗದ ಗುರುತನ್ನು ಉಳಿಸಿ ಹೋಗುತ್ತವೆ’ ಎಂದು ಅಮಿತಾಭ್ ಬಚ್ಚನ್ ಬರೆದುಕೊಂಡಿದ್ದಾರೆ. ಈ ಇಳಿ ವಯಸ್ಸಿನಲ್ಲೂ ಅವರ ಕೆಲಸದ ಮೇಲಿನ ಪ್ರೀತಿ, ಶಿಸ್ತು ಹಾಗೂ ಧೈರ್ಯವನ್ನು ನೋಡಿ ಅಭಿಮಾನಿಗಳು ಕೊಂಡಾಡುತ್ತಿದ್ದಾರೆ.

ಈ ವರ್ಷ ಇದವರೆಗೆ ‘ಝುುಂಡ್’, ‘ರನ್​ವೇ 34’, ‘ಬ್ರಹ್ಮಾಸ್ತ್ರ’, ‘ಗುಡ್​ಬೈ’ ಚಿತ್ರಗಳಲ್ಲಿ ಅಮಿತಾಭ್ ಬಚ್ಚನ್ ನಟಿಸಿದ್ದು, ಮತ್ತೊಂದು ಚಿತ್ರ ‘ಊಂಚಾಯಿ’ ನವೆಂಬರ್ 11ರಂದು ಬಿಡುಗಡೆಯಾಗಲಿದೆ. ಉಳಿದಂತೆ ‘ಪ್ರಾಜೆಕ್ಟ್ ಕೆ’ ಚಿತ್ರದಲ್ಲಿ ಅವರು ನಟಿಸುತ್ತಿದ್ದು, ‘ಗಣಪತ್’, ‘ಘೂಮರ್’ ಹಾಗೂ ‘ಉಮೇಶ್ ಕ್ರಾನಿಕಲ್ಸ್’ ಚಿತ್ರಗಳಲ್ಲಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. -ಏಜೆನ್ಸೀಸ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net