

ಎಣ್ಣೆ ಹಾಡುಗಳಿಗೆ ಫೇಮಸ್ಸು ನಮ್ಮ ಯೋಗರಾಜ್ ಭಟ್ರು. ಅವರ ಸಾಹಿತ್ಯವನ್ನು ಪ್ರೀತಿಸುವ ಪ್ರತಿಯೊಬ್ಬರಿಗೂ ಅವರು ಬರೆಯುವ ಎಣ್ಣೆ ಹಾಡು ಹಾಟ್ ಫೇವರಿಟ್. ಅದರಲ್ಲೂ ಇದೀಗ ಸರ್ಕಾರ ಎಣ್ಣೆ ಮಾರಾಟಕ್ಕೆ ಗ್ರೀನ್ ಸಿಗ್ನಲ್ ನೀಡಿದೆ. ಇಂಥ ಹೊತ್ತಲ್ಲಿ ಭಟ್ಟರ ಕಡೆಯಿಂದ ಎಣ್ಣೆ ಹಾಡು ಬಂದರೆ ಮದ್ಯ ಪ್ರಿಯರಿಗೆ ಒಂದು ರೀತಿ ಡಬಲ್ ಧಮಾಕಾ ಇದ್ದಂತೆ.
ಹೌದು, ಕಳೆದ ಹಲವು ವಾರಗಳ ಲಾಕ್ಡೌನ್ ಸಡಿಲಿಕೆ ಹಿನ್ನೆಲೆಯಲ್ಲಿ ವೈನ್ಶಾಪ್ಗಳು ತೆರೆದು, ಮದ್ಯಪ್ರಿಯರ ಆಸೆ ಈಡೇರಿಸಿವೆ. ಒಂದಷ್ಟು ಕಟ್ಟುನಿಟ್ಟಿನ ಕ್ರಮಗಳ ಜತೆ ಮಾರಾಟ ಪ್ರಕ್ರಿಯೆ ಬಿರುಸಾಗಿದೆ. ಮದ್ಯದ ಅಂಗಡಿ ಮುಂದೆ ಸರದಿ ಸಾಲಲ್ಲಿ ನಿಂತು ಲಿಂಗ ಬೇಧ ಮರೆತು ನೆಚ್ಚಿನ ಬ್ರಾಂಡ್ ಹೊತ್ತೊಯ್ಯುತ್ತಿದ್ದಾರೆ ಮದ್ಯಪ್ರಿಯರು. ಈ ಸ್ಥಿತಿ ನೋಡಿ ವಿಕಟ ಕವಿ ಯೋಗರಾಜ್ ಭಟ್ಗೆ ಹಾಡೊಂದು ಹೊಳೆದಿದೆ. ವಿಚಿತ್ರ ಏನೆಂದರೆ ಆ ಹಾಡು ಸೃಷ್ಟಿಗೆ ಕಾರಣ ಓರ್ವ ಮಹಿಳೆಯಂತೆ!
‘ರಸ್ತೆಗಳ ಮೇಲೆ ಓಡಾಡುತ್ತಿದ್ದಾಗ, ಈ ಮದ್ಯಪಾನ ಪ್ರಿಯರು ವೈನ್ಶಾಪ್ ಮುಂದೆ ಸರತಿಯಲ್ಲಿ ನಿಂತಿದ್ದನ್ನು ನೋಡುತ್ತಿದ್ದೆ. ಒಂದಷ್ಟು ಮಂದಿ ಮುಖಕ್ಕೆ ಬಟ್ಟೆ ಕಟ್ಟಿಕೊಂಡು ಮುಖ ಮುಚ್ಚಿಕೊಳ್ಳುತ್ತಿದ್ದರು. ಅವರ ಕಣ್ಣಲ್ಲಿ, ನಾಚಿಕೆ, ದಾಕ್ಷಿಣ್ಯ, ಬಾಯಾರಿಕೆ, ಮೋಹ, ದಾಹ ನೋಡಿ ಗುಲಾಮ್ ಅಲಿ ನೆನಪಾದರು. ಹಂಗಾಮ್ ಹೈ ಕ್ಯೂಂ ಬರ್ಫಾ.. ಹಾಡು ನೆನಪಾಯ್ತು.. ಅವರ ಕಣ್ಣು ನೋಡಿ ಕನ್ನಡದಲ್ಲಿ ನಾನೂ ಒಂದೆರಡು ಸಾಲು ಹಾಡಬೇಕೆನಿಸಿತು. ಆಗ ಸೃಷ್ಟಿಯಾಗಿದ್ದೆ ಈ ಹಾಡು..’
ಬಾಯಾರಿದೆ ಬೈಬೇಡಿ.. ಒಂಚೂರೆ ನಾ ಕುಡಿದಿರುವೆ
ಡಕಾಯಿತಿ ಮಾಡಿಲ್ಲ, ಕೊಲೆಪಾತಕ ನಾನಲ್ಲ..
ಬಾಯಾರಿದೆ ಬೈಬೇಡಿ,. ಒಂಚೂರೆ ನಾ ಕುಡಿದಿರುವೆ
ನಾ ಕುಡಿದಿರುವೆ.. ನಾ ಕುಡಿದಿರುವೆ..
ಸ್ವತಃ ತಾವೇ ಹಾಡಿರುವ ಈ ವಿಡಿಯೋವನ್ನು ಫೇಸ್ಬುಕ್ನಲ್ಲಿ ಹಂಚಿಕೊಂಡಿರುವ ಯೋಗರಾಜ್ ಭಟ್, ‘ನೋಡಲಾಗಲಿಲ್ಲ ಬಾಯಾರಿದವರ ಬಾಧೆ..’ ಎಂಬ ಕ್ಯಾಪ್ಶನ್ ಕೊಟ್ಟಿದ್ದಾರೆ. ಅಷ್ಟೇ ಅಲ್ಲ ಸಾಮಾಜಿಕ ಜಾಲತಾಣದಲ್ಲಿ ಹಂಗಾಮ್ ಹೈ ಕ್ಯೂಂ ಬರ್ಫಾ.. ಹಾಡು ಗುನುಗಿದ ಮಹಿಳೆಯನ್ನು ನೋಡಿ ಈ ಹಾಡನ್ನು ಸೃಷ್ಟಿಸಿದ್ದಾರೆ. ‘ಈ ಮೇಲ್ಕಂಡ ಸಾಹಸಕ್ಕೆ ಈ ಸುಂದರ ಪುಣ್ಯಾತ್ಗಿತ್ತಿಯ ಗಾಯನವೇ ಕಾರಣ’ ಎಂದು ಹೇಳಿಕೊಂಡಿದ್ದಾರೆ.