ಪ್ರೇಮ್​ ‘ಏಕ್​ ಲವ್​ ಯಾ’ ಚಿತ್ರಕ್ಕೆ ಸ್ವಾಮೀಜಿಗಳಿಂದ ಸಂಗೀತ ನಿರ್ದೇಶನ!

new
Published on

ಬೆಂಗಳೂರು: ನಿರ್ದೇಶಕ ಪ್ರೇಮ್​, ಒಂದಲ್ಲ ಒಂದು ವಿಚಾರಕ್ಕೆ ಸುದ್ದಿಯಾಗುತ್ತಾರೆ. ಕೆಲವೊಂದಿಷ್ಟನ್ನು ಅವರೇ ಸುದ್ದಿ ಮಾಡುತ್ತಾರೆ. ಇದೀಗ ತಮ್ಮ ನಿರ್ದೇಶನದ ಸಿನಿಮಾ ‘ಏಕ್​ ಲವ್​ ಯಾ’ ಕುರಿತು ಒಂದಷ್ಟು ಅಪ್​ಡೇಟ್​ ಮಾಹಿತಿಯನ್ನು ಹೊರಹಾಕಿದ್ದಾರೆ. ಅದೇನೆಂದರೆ, ಚಿತ್ರದ ಹಾಡುಗಳಿಗೆ ಸ್ವಾಮೀಜಿಯೊಬ್ಬರ ಕಡೆಯಿಂದ ಮ್ಯೂಸಿಕ್​ ಮಾಡಿಸುತ್ತಿದ್ದಾರೆ! ಅರೇ, ಅರ್ಜುನ್​ ಜನ್ಯ ಸಂಗೀತ ನೀಡುವುದು ಅಧಿಕೃತವಾಗಿತ್ತು. ಈಗ ಬದಲಾವಣೆ ಮಾಡಿದ್ರಾ ಪ್ರೇಮ್? ಹೀಗೊಂದು ಪ್ರಶ್ನೆ ಮೂಡಿದರೆ, ಅದಕ್ಕೆ ಉತ್ತರವೂ ಇಲ್ಲಿಯೇ ಇದೆ.

ಸಿನಿಮಾ ಸಂಬಂಧಿ ಪೋಸ್ಟ್​ ಪ್ರೊಡಕ್ಷನ್​ ಕೆಲಸಗಳಿಗೆ ಸೀಮಿತ ಜನರನ್ನು ಬಳಸಿಕೊಂಡು ಕೆಲಸ ಆರಂಭಿಸುವಂತೆ ಸರ್ಕಾರ ಇತ್ತೀಚೆಗಷ್ಟೇ ಹೇಳಿತ್ತು. ಅದರಂತೆ ಬಹುತೇಕ ಚಿತ್ರತಂಡಗಳು ಬಾಕಿ ಉಳಿದ ಚಿತ್ರೀಕರಣೋತ್ತರ ಕೆಲಸಗಳಿಗೆ ಚಾಲನೆ ನೀಡಿವೆ. ಅದೇ ರೀತಿ ‘ಏಕ್ ​ಲವ್​ ಯಾ’ ಚಿತ್ರದ ಹಾಡುಗಳ ಕೆಲಸಗಳಲ್ಲಿಯೂ ಪ್ರೇಮ್​ ಬಿಜಿಯಾಗಿದ್ದಾರೆ. ಶುಕ್ರವಾರ ಅರ್ಜುನ್​ ಜನ್ಯ ಸ್ಟುಡಿಯೋಗೆ ತೆರಳಿ ಟ್ಯೂನ್​ ಕೇಳಿದ್ದಾರೆ. ಅಷ್ಟೇ ಅಲ್ಲ ಅರ್ಜುನ್​ ಅವತಾರ ನೋಡಿ ಹೀಗೆ ಬರೆದುಕೊಂಡಿದ್ದಾರೆ.

‘ಇವ್ರ್ಯಾರೋ ಹೊಸಾ ಸ್ವಾಮೀಜಿ ಅಂತ ಕನ್​ಫ್ಯೂಸ್​ ಆಗ್ಬೇಡಿ, ನಮ್ಮ ಮ್ಯೂಸಿಕ್ ಮಾಂತ್ರಿಕ ಅರ್ಜುನ್ ಜನ್ಯನೇ...ಅಪ್​ಡೇಟೆಡ್​ ಸಾಂಗ್'ಗಳನ್ನ ಕೊಡೋದರ ಜೊತೆಗೆ ಅವ್ರ ಗೆಟಪ್ ಕೂಡ ಅಪ್​ಡೇಟ್ ಮಾಡ್ಕೊಂಡಿದಾರೆ’ ಎಂದಿದ್ದಾರೆ. ಸದ್ಯ ಬಹುತೇಕ ಚಿತ್ರೀಕರಣ ಮುಗಿಸಿಕೊಂಡಿರುವ ‘ಏಕ್​ ಲವ್​ ಯಾ’ ಚಿತ್ರತಂಡ, ರೆಕಾರ್ಡಿಂಗ್​ನಲ್ಲಿ ತೊಡಗಿಸಿಕೊಂಡಿದೆ. ರಕ್ಷಿತಾ ಸಹೋದರ ರಾಣಾ ನಾಯಕನಾಗಿ ಚಂದನವನ ಪ್ರವೇಶಿಸುತ್ತಿದ್ದು, ರಚಿತಾ ರಾಮ್ ಸೇರಿ ಹಲವರು ತಾರಾಬಳಗದಲ್ಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net