ನೀವ್ಯಾಕೆ ನನ್ನ ಪಿಆರ್​ಓ ಆಗಬಾರದು? ಕಂಗನಾಗೆ ಆಹ್ವಾನ ಕೊಟ್ಟ ದಿಲ್ಜಿತ್​

Kangana - Diljit - Final
Published on

ಮುಂಬೈ: ಈ ಕಂಗನಾ ರಣಾವತ್​ ಮತ್ತು ಗಾಯಕ ದಿಲ್ಜಿತ್​ ದೊಸಾಂಜ್​ ನಡುವಿನ ಕದನ ಸದ್ಯಕ್ಕೆ ಮುಗಿಯುವಂತೆ ಕಾಣುತ್ತಿಲ್ಲ. ಇತ್ತೀಚೆಗಷ್ಟೇ, ದಿಲ್ಜಿತ್​ ಅವರು ಲೋಕಲ್​ ಕ್ರಾಂತಿಕಾರಿ ಎಂದು ಕಂಗನಾ ಹೇಳಿದ್ದರು. ಇದೀಗ ನೀವ್ಯಾಕೆ ನನ್ನ ಪಿಆರ್​ಓ ಆಗಬಾರದು ಎಂದು ದಿಲ್ಜಿತ್​ ದೊಸಾಂಜ್​ ಆಹ್ವಾನ ಕೊಟ್ಟಿದ್ದಾರೆ.

ಕಂಗನಾ ಮತ್ತು ದಿಲ್ಜಿತ್​ ನಡುವಿನ ಕದನಕ್ಕೆ ಒಂದು ತಿಂಗಳ ಇತಿಹಾಸವಿದೆ. ಕಳೆದ ತಿಂಗಳು ದೆಹಲಿಯಲ್ಲಿ ಪ್ರಾರಂಭವಾದ ರೈತರ ಪ್ರತಿಭಟನೆಯಿಂದ, ಕಂಗನಾ ಮತ್ತು ದಿಲ್ಜಿತ್​ ಅವರ ಜಗಳವೂ ಪ್ರಾರಂಭವಾಯಿತು. ಆ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಒಬ್ಬ ಹಿರಿಯರ ಕುರಿತು ಕಂಗನಾ ಟ್ವೀಟ್​ ಮಾಡಿದ್ದರು. 10 ರೂ ಕೊಟ್ಟರೆ ಈ ಮಹಿಳೆ ರೈತ ಚಳವಳಿಗೂ ಬರುತ್ತಾರೆ, ಶಾಹೀನ್​ಭಾಗ್​ ಪ್ರತಿಭಟನೆಯಲ್ಲೂ ಕಾಣಿಸಿಕೊಳ್ಳುತ್ತಾರೆ ಎಂದು ಹೇಳಿದ್ದರು.

ಇದರ ವಿರುದ್ಧ ಗಟ್ಟಿಧ್ವನಿ ಎತ್ತಿದವರು ದಿಲ್ಜಿತ್​. ರೈತಮಹಿಳೆಯ ಕುರಿತಾಗಿ ಈ ರೀತಿಯ ಕೆಟ್ಟ ಹೇಳಿಕೆ ಸರಿಯಲ್ಲ ಎಂದು ಅವರು ಖಂಡಿಸಿದ್ದರು. ಈ ವಿಷಯವಾಗಿ, ಎಲ್ಲರೂ ಕಂಗನಾ ವಿರುದ್ಧ ತಿರುಗಿಬಿದ್ದ ಕಾರಣ, ಆಕೆ ತಮ್ಮ ಟ್ವೀಟ್​ ಹಿಂಪಡೆದಿದ್ದರು. ಅಲ್ಲಿಂದ ದಿಲ್ಜಿತ್​ ಮೇಲೆ ಸಮಯ ಸಿಕ್ಕಾಗಲೆಲ್ಲಾ ಕಂಗನಾ ಟಾಂಗ್​ ಕೊಡುತ್ತಲೇ ಇದ್ದಾರೆ.

ಇತ್ತೀಚೆಗೆ ದಿಲ್ಜಿತ್​ ಹಿಮದ ಮಧ್ಯೆ ಇರುವ ಒಂದು ಫೋಟೋ ಶೇರ್​ ಮಾಡಿಕೊಂಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಕಂಗನಾ, 'ಹೌದೋ ಅಣ್ಣ. ಅಲ್ಲಿ ರೈತರನ್ನು ಎತ್ತಿಗಟ್ಟಿ ರಸ್ತೆಗೆ ದೂಡಿದ್ದ ಲೋಕಲ್​ ಕ್ರಾಂತಿಕಾರಿಗಳು ವಿದೇಶದಲ್ಲಿ ಮಜಾ ಮಾಡುತ್ತಿದ್ದಾರೆ. ಇದು ನಿಜವಾದ ಕ್ರಾಂತಿ' ಎಂದು ಅವರು ಟಾಂಗ್ ಕೊಟ್ಟಿದ್ದರು.

ಇದಕ್ಕೆ ಉತ್ತರ ಕೊಟ್ಟಿರುವ ದಿಲ್ಜಿತ್​, 'ನೀವು ಏನೆಲ್ಲಾ ಮಾಡಿದ್ದೀರಾ ಎಂಬುದನ್ನು ನೀವು ಮರೆತಿದ್ದರೂ, ಪಂಜಾಬಿಗಳು ಮರೆತಿಲ್ಲ. ಸದ್ಯದಲ್ಲೇ ಅದಕ್ಕೆಲ್ಲಾ ಸರಿಯಾಗಿ ಉತ್ತರ ಕೊಡುತ್ತೇವೆ' ಎಂದಿದ್ದರು. ಆ ನಂತರ ಕಂಗನಾ ಮತ್ತು ದಿಲ್ಜಿತ್​ ನಡುವೆ ಇನ್ನಷ್ಟು ಮಾತಿನ ಸಮರ ಮುಂದುವರೆದಿದೆ.

ಕಂಗನಾ ತಮ್ಮ ವಿರುದ್ಧ ಪದೇಪದೇ ಹರಿಹಾಯುತ್ತಿರುವ ಕುರಿತು ಮಾತನಾಡಿರುವ ದಿಲ್ಜಿತ್​, 'ಆಕೆ ನನ್ನ ಬಗ್ಗೆ ಇಷ್ಟೊಂದು ಯೋಚಿಸುತ್ತಿರುವುದು ನೋಡಿದರೆ, ನನ್ನನ್ನು ತುಂಬಾ ಹಚ್ಚಿಕೊಂಡಿರುವಂತೆ ಕಾಣುತ್ತಿದೆ. ಇದನ್ನೆಲ್ಲಾ ನೋಡಿದರೆ, ತಮ್ಮ ಪ್ರಚಾರಕರ್ತೆಯನ್ನಾಗಿ ನೇಮಿಸಿಕೊಂಡರೆ ಹೇಗೆ ಎಂಬ ಯೋಚನೆ ಆಗಾಗ ಬರುತ್ತದೆ' ಎಂದು ದಿಲ್ಜಿತ್​ ಹೇಳಿಕೊಂಡಿದ್ದಾರೆ. ಇದಕ್ಕೆ ಕಂಗನಾ ಏನು ಉತ್ತರ ಕೊಡುತ್ತಾರೋ ನೋಡಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net