

ವಿಜಯವಾಣಿ ಸುದ್ದಿಜಾಲ ಬೆಂಗಳೂರು
ಪ್ರತಿ ವರ್ಷ ಆ. 13ರಂದು ಅಂತಾರಾಷ್ಟ್ರೀಯ ಎಡಗೈ ಬಳಕೆದಾರರ ದಿನವನ್ನಾಗಿ ಆಚರಿಸಲಾಗುತ್ತದೆ. ವಿಶ್ವಾದ್ಯಂತ ಪ್ರತಿ ನೂರರಲ್ಲಿ 10ರಿಂದ 12 ಜನ ಲೆಫ್ಟಿಗಳಾಗಿದ್ದು, ಭಾರತದಲ್ಲಿ ಅವರ ಸಂಖ್ಯೆ ಶೇಕಡಾ 5ರಿಂದ 7ರಷ್ಟಿದೆ ಎನ್ನಲಾಗಿದೆ. ಇದೀಗ ಸ್ಯಾಂಡಲ್ವುಡ್ನಲ್ಲಿ ಲೆಫ್ಟಿಗಳ ಕುರಿತ ಸಿನಿಮಾವೊಂದು ಸದ್ದು ಮಾಡುತ್ತಿದೆ. ಹೆಸರು "ಎಡಗೈಯೇ ಅಪಘಾತಕ್ಕೆ ಕಾರಣ'. ಯುವಪ್ರತಿಭೆ ಸಮರ್ಥ್ ಬಿ. ಕಡಕೋಳ್ ಈ ಚಿತ್ರವನ್ನು ನಿರ್ದೇಶಿಸಿದ್ದು, ಲಾಕ್ಡೌನ್ನಲ್ಲಿ ಈ ಕಥೆ ಬರೆದ ಬಗ್ಗೆ ಮಾಹಿತಿ ಹಂಚಿಕೊಂಡರು.
"ಅಂಬಿ ನಿಂಗ್ ವಯಸ್ಸಾಯ್ತೋ' ಖ್ಯಾತಿಯ ನಿರ್ದೇಶಕ ಗುರುದತ್ ಗಾಣಿಗ ಈ ಚಿತ್ರ ನಿರ್ಮಿಸಿದ್ದು, "ಇದೊಂದು ವಿಭಿನ್ನ ಕಥೆ. ಇಂತಹ ಕಥೆಗಳು ಬೇರೆ ಭಾಷೆಗಳಲ್ಲಿ ಬಂದಾಗ ವಾವ್ ಎನ್ನುತ್ತಾರೆ. ಇದೀಗ ಕನ್ನಡದಲ್ಲೇ ವಿಭಿನ್ನವಾದ ಕಥೆ ಮಾಡಿದ್ದೇವೆ' ಎಂದರು. ನಾಯಕ ದಿಗಂತ್, "ಚಿತ್ರದ ಕಥೆ ಅದ್ಭುತವಾಗಿದೆ. ಒಂದೊಳ್ಳೆ ತಂಡದ ಜತೆ ಒಳ್ಳೆ ಪ್ರಯತ್ನ ಮಾಡಿದ್ದೇವೆ. ಮರ್ಡರ್ ಮಿಸ್ಟರಿ, ಡಾರ್ಕ್ ಕಾಮಿಡಿ ಮತ್ತು ಸಸ್ಪೆನ್ಸ್ ಥ್ರಿಲ್ಲರ್ ವಿಷಯಗಳಿರುವ ಕಥೆಯಿದು. ಹೆಸರೇ ಹೇಳುವಂತೆ ಎಡಗೈ ಬಳಸುವವರ ಸಮಸ್ಯೆಗಳ ಸುತ್ತ ಹೆಣೆದ ಚಿತ್ರ' ಎಂದು ಹೇಳಿಕೊಂಡರು. ದಿಗಂತ್ಗೆ ನಾಯಕಿಯಾಗಿ ಧನು ಹರ್ಷ ನಟಿಸಿದ್ದು, ಜತೆಗೆ ರಾಧಿಕಾ ನಾರಾಯಣ್, ನಿಧಿ ಸುಬ್ಬಯ್ಯ ಮುಖ್ಯ ಭೂಮಿಕೆಯಲ್ಲಿದ್ದಾರೆ. ಭಜರಂಗಿ ಲೋಕಿ, ಕೃಷ್ಣ ಹೆಬ್ಬಾಳೆ ಪ್ರಮುಖ ತಾರಾಗಣದಲ್ಲಿದ್ದಾರೆ.
ಸರ್ವರ್ಗಳಾದ ನಟ, ನಟಿಯರು
ವಿಶ್ವ ಎಡಗೈ ಬಳಕೆದಾರರ ದಿನದ ಅಂಗವಾಗಿ ನಟ ದಿಗಂತ್ ಮತ್ತು ನಿಧಿ ಸುಬ್ಬಯ್ಯ ಒಂದು ದಿನದ ಮಟ್ಟಿಗೆ ತಾವೂ ಲೆಫ್ಟಿಗಳಾಗಿದ್ದಾರೆ. ಮಾತ್ರವಲ್ಲ ರೆಸ್ಟೋರೆಂಟ್ ಒಂದರಲ್ಲಿ ಇಬ್ಬರೂ ಸರ್ವರ್ಗಳಾಗಿ ಗ್ರಾಹಕರಿಗೆ ಊಟ, ತಿಂಡಿ ಸರ್ವ್ ಮಾಡಿದ್ದಾರೆ. ಹಾಗೆ ಲೆಫ್ಟಿಗಳ ಬಗ್ಗೆ ಅರಿವು ಮೂಡಿಸಿ, "ಎಡಗೈಯೇ ಅಪಘಾತಕ್ಕೆ ಕಾರಣ' ಚಿತ್ರದ ಪ್ರಚಾರ ಕೂಡ ಮಾಡಿದ್ದಾರೆ.