ಅನುರಾಗ್​ ಅವರಿಂದ ಈ ಮಾತು ನಿರೀಕ್ಷಿಸಿರಲಿಲ್ಲ ... ರವಿಕಿಶನ್​ ಬೇಸರ

Anurag - Ravikishan
Published on

ನವದೆಹಲಿ: 'ಬಹುಶಃ ಬಾಲಿವುಡ್​ನಲ್ಲಿ ಯಾರಾದರೂ ಅತೀ ಹೆಚ್ಚು ಕಾಲ ಮಾದಕವಸ್ತುಗಳನ್ನು ಬಳಸಿದ್ದಾರೆಂದರೆ ಅದು ರವಿಕಿಶನ್​ ಎಂದು ಎಲ್ಲರಿಗೂ ಗೊತ್ತಿದೆ. ಅವರ ದಿನ ಶುರುವಾಗುತ್ತಿದ್ದುದೇ ಶಿವನ ಭಜನೆಯಿಂದ ...' ಎಂದು ಇತ್ತೀಚೆಗಷ್ಟೇ ನಟ-ನಿರ್ದೇಶಕ ಅನುರಾಗ್​ ಕಶ್ಯಪ್​ ಹೇಳಿದ್ದರು.

ಇದಕ್ಕೆ ಪ್ರತಿಕ್ರಿಯಿಸಿರುವ ನಟ ಮತ್ತು ಸಂಸದ ರವಿಕಿಶನ್​, ಅನುರಾಗ್​ ಅವರಿಂದ ತಾವು ಇಂತಹ ಮಾತುಗಳನ್ನು ಖಂಡಿತವಾಗಿಯೂ ನಿರೀಕ್ಷಿಸಿರಲಿಲ್ಲ ಎಂದು ಹೇಳಿದ್ದಾರೆ.

ಈ ಕುರಿತು ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು, 'ಅನುರಾಗ್​ ಅವರಿಂದ ನಾನು ಇಂತಹ ಮಾತುಗಳನ್ನು ನಿರೀಕ್ಷಿಸಿರಲಿಲ್ಲ. ನಾನು ಶಿವನ ಭಕ್ತ. ಅದೇ ಕಾರಣಕ್ಕೆ ಬೆಳಿಗ್ಗೆಯೇ ಶಿವನ ಜಪ ಮಾಡುತ್ತೇನೆ. ಆದರೆ, ಡ್ರಗ್ಸ್​ ಸಮರದಲ್ಲಿ ನನ್ನನ್ನು ಅವರು ಸಪೋರ್ಟ್​ ಮಾಡಲಿಲ್ಲ ಎಂಬ ಬೇಸರವಿದೆ. ಹಾಗೆಯೇ, ನಾನು ಹಿಂದೊಮ್ಮೆ ಮಾದಕವಸ್ತುಗಳನ್ನು ಬಳಸುತ್ತಿದ್ದೆ ಮತ್ತು ಸಂಸದನಾದ ಮೇಲೆ ಅವೆಲ್ಲವನ್ನೂ ಬಿಟ್ಟಿದ್ದೇನೆ ಎನ್ನುವ ಅವರ ಮಾತುಗಳಿಂದ ಬೇಸರವಾಗಿದೆ. ಇದು ಸುಳ್ಳು' ಎಂದು ರವಿಕಿಶನ್​ ಹೇಳಿಕೊಂಡಿದ್ದಾರೆ.

ಇದಕ್ಕೂ ಮುನ್ನ ಕಳೆದ ಸೋಮವಾರ ಸಂಸತ್ತಿನಲ್ಲಿ ಮಾತನಾಡುವ ಸಂದರ್ಭದಲ್ಲಿ, 'ದೇಶದ ಯುವಜನತೆಯನ್ನು ದಿಕ್ಕುತಪ್ಪಿಸಲು ನೆರೆರಾಷ್ಟ್ರಗಳು ಸಂಚು ರೂಪಿಸುತ್ತಿವೆ. ಪಾಕಿಸ್ತಾನ ಮತ್ತು ಚೀನಾದಿಂದ ಅಕ್ರಮವಾಗೊ ಪಂಜಾಬ್​ ಮತ್ತು ನೇಪಾಳದ ಮೂಲಕ ಇಲ್ಲಿಗೆ ಡ್ರಗ್ಸ್​ ತರಲಾಗುತ್ತಿದೆ. ಡ್ರಗ್ಸ್​ ಚಟ ಹೆಚ್ಚಾಗುತ್ತಿದೆ. ಅದರಲ್ಲೂ ಚಿತ್ರರಂಗದಲ್ಲೂ ಜಾಸ್ತಿಯಾಗಿದೆ. ಈ ವಿಷಯವಾಗಿ ಎನ್​ಸಿಬಿ ಒಳ್ಳೆಯ ಕೆಲಸ ಮಾಡುತ್ತಿದೆ. ಕೇಂದ್ರ ಸರ್ಕಾರ ಈ ನಿಟ್ಟಿನಲ್ಲಿ ಇನ್ನೂ ಕಠಿಣ ಕ್ರಮ ಕೈಗೊಳ್ಳಬೇಕು' ಎಂದು ರವಿಕಿಶನ್​ ಹೇಳಿದ್ದರು.

ಇದಕ್ಕೆ ಪ್ರತಿಯಾಗಿ ಮಾತನಾಡಿದ್ದ ಅನುರಾಗ್​ ಕಶ್ಯಪ್​, 'ರವಿಕಿಶನ್​ ಅವರು ನನ್ನ 'ಮುಕ್ಕಾಬಾಜ್​' ಚಿತ್ರದಲ್ಲಿ ನಟಿಸಿದ್ದರು. ರವಿಕಿಶನ್​ ಅವರ ದಿನ ಶುರುವಾಗುತ್ತಿದ್ದುದೇ ಮಾದಕವಸ್ತುಗಳಿಂದ. ಬಹುಶಃ ಬಾಲಿವುಡ್​ನಲ್ಲಿ ಯಾರಾದರೂ ಅತೀ ಹೆಚ್ಚು ಕಾಲ ಮಾದಕವಸ್ತುಗಳನ್ನು ಬಳಸಿದ್ದಾರೆಂದರೆ ಅದು ರವಿಕಿಶನ್​ ಎಂದು ಎಲ್ಲರಿಗೂ ಗೊತ್ತಿದೆ. ಈಗವರು ಬಿಟ್ಟಿರಬಹುದು. ಆದರೆ, ಆ ಬಗ್ಗೆ ಮಾತನಾಡಿದ್ದು ಆಶ್ಚರ್ಯವಾಯಿತು' ಎಂದು ಅನುರಾಗ್​ ಹೇಳಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net