ನಾಲ್ಕನೇ ಬಾರಿಗೆ ಮದುವೆಯಾದ್ರಾ ವನಿತಾ ವಿಜಯ್​ಕುಮಾರ್​?

Vanitha Vijaykumar - Final
Published on

ಚೆನ್ನೈ: ತಮಿಳು ನಟಿ ವನಿತಾ ವಿಜಯ್​ಕುಮಾರ್​ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಇತ್ತೀಚೆಗೆ, ಅವರ ಫೋಟೋವೊಂದು ಇಂಟರ್​ನೆಟ್​ನಲ್ಲಿ ಕಾಣಿಸಿಕೊಂಡಿದ್ದು, ಈ ಫೋಟೋ ಹಲವರಲ್ಲಿ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಈ ಫೋಟೋ ನೋಡಿ ಹಲವರು, ವನಿತಾ ಏನಾದರೂ ನಾಲ್ಕನೆಯ ಬಾರಿಗೆ ಮದುವೆಯಾಗಿದ್ದಾರಾ ಎಂದು ಕೇಳುತ್ತಿದ್ದಾರೆ.

ತಮಿಳಿನ ಖ್ಯಾತ ನಟ ವಿಜಯ್​ಕುಮಾರ್​ ಅವರ ಮಗಳಾಗಿರುವ ವನಿತಾ, ಇದುವರೆಗೂ ಮದುವೆಯಿಂದಲೇ ಹೆಚ್ಚು ಗುರುತಿಸಿಕೊಂಡಿದ್ದವರು. ಇದುವರೆಗೂ ಮೂರು ಬಾರಿಗೆ ವನಿತಾ ಮದುವೆಯಾಗಿದ್ದಾರೆ. ಈ ಹಿಂದೆ ಎರಡು ಮದುವೆಗಳು ಕಾರಣಾಂತರಗಳಿಂದ ವಿಫಲಗೊಂಡಿದ್ದವು. ಕಳೆದ ವರ್ಷ ಪೀಟರ್​ ಪಾಲ್​ ಎಂಬುವವರನ್ನು ಪ್ರೀತಿಸಿ ಮದುವೆಯಾದ ವನಿತಾ, ಮೂರೇ ತಿಂಗಳಲ್ಲಿ ಅವರಿಂದ ದೂರವಾಗಿದ್ದರು. ಪೀಟರ್​ ಅತಿಯಾಗಿ ಕುಡಿಯುತ್ತಾರೆ ಮತ್ತು ಅವರು ತಮ್ಮ ಮೊದಲ ಪತ್ನಿಗೆ ವಿಚ್ಛೇಧನ ನೀಡಿಲ್ಲ ಎಂಬ ಕಾರಣಕ್ಕೆ ಪೀಟರ್​ನಿಂದ ದೂರವಾಗಿದ್ದರು.

ಪೀಟರ್​ನಿಂದ ದೂರವಾದ ಬಳಿಕ ವನಿತಾ ಅವರ ಸುದ್ದಿಯೇ ಇರಲಿಲ್ಲ. ಈಗ ನೋಡಿದರೆ, ಪವರ್​ ಸ್ಟಾರ್​ ಎಂದೇ ಖ್ಯಾತರಾಗಿರುವ ನಟ ಶ್ರೀನಿವಾಸ್​ ಅವರ ಜತೆಗಿರುವ ಫೋಟೋವೊಂದನ್ನು ವನಿತಾ ಸೋಷಿಯಲ್​ ಮೀಡಿಯಾ ಮೂಲಕ ಹಂಚಿಕೊಂಡಿದ್ದಾರೆ. ಈ ಫೋಟೋ ನೋಡಿ, ವನಿತಾ ನಾಲ್ಕನೆಯ ಬಾರಿಗೆ ಮದುವೆಯಾಗಿದ್ದಾರೆ ಎಂಬ ಸುದ್ದಿ ಒಂದು ಕಡೆಯಾದರೆ, ಇದೊಂದು ಗಿಮಿಕ್​ ಅಷ್ಟೇ ಎಂಬ ಮಾತು ಸಹ ಕೇಳಿಬರುತ್ತಿದೆ.

ಮೂಲಗಳ ಪ್ರಕಾರ, ವನಿತಾ ಹೊಸ ಚಿತ್ರವೊಂದರಲ್ಲಿ ನಟಿಸುತ್ತಿದ್ದು, ಆ ಚಿತ್ರದಲ್ಲಿ ಶ್ರೀನಿವಾಸನ್​ ಸಹ ನಟಿಸುತ್ತಿದ್ದಾರಂತೆ. ಈ ಚಿತ್ರದಲ್ಲಿ ಅವರಿಬ್ಬರೂ ಮದುವೆಯಾಗುವ ದೃಶ್ಯವೊಂದಿದೆಯಂತೆ. ಪ್ರಚಾರಕ್ಕಾಗಿ ವನಿತಾ ಈ ಫೋಟೋ ಹಂಚಿಕೊಂಡಿದ್ದು, ಮದುವೆಯಾಗಿರುವುದು ಸುಳ್ಳು ಎಂದು ಹೇಳಲಾಗುತ್ತಿದೆ. ಆದರೆ, ವನಿತಾ ಮಾತ್ರ ಅದ್ಯಾಕೋ ಮೌನವಾಗಿದ್ದಾರೆ. ವನಿತಾ ಈ ವಿಷಯದಲ್ಲಿ ಮೌನವಹಿಸಿರುವುದೇಕೆ ಎಂದು ಕಾಲವೇ ಉತ್ತರಿಸಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net