

ಹೈದರಾಬಾದ್: ನಟಿ ಸಮಂತಾ ದಕ್ಷಿಣ ಭಾರತ ಸಿನಿರಂಗದ ಮುಂಚೂಣಿ ನಟಿ ಎಂಬುದರಲ್ಲಿ ಸಂಶಯವಿಲ್ಲ. ವಿಜಯ್, ಸೂರ್ಯ, ಮಹೇಶ್ ಬಾಬು, ಅಲ್ಲು ಅರ್ಜುನ್, ಜೂ. ಎನ್ಟಿಆರ್ ಹಾಗೂ ರಾಮಚರಣ್ ಸೇರಿದಂತೆ ಸ್ಟಾರ್ ನಟರ ಜತೆ ನಟಿಸಿದ್ದಾರೆ. ನಟ ನಾಗಚೈತನ್ಯರನ್ನು ಮದುವೆಯಾಗಿ ಡಿವೋರ್ಸ್ ಆಗುವ ಮೂಲಕ ವೈಯಕ್ತಿಕ ಜೀವನದಲ್ಲೂ ಸಮಂತಾ ಸುದ್ದಿಯಾದರು.
ತಾಜಾ ಸಂಗತಿ ಏನೆಂದರೆ, ಸಮಂತಾ ಅವರು ಮಹೇಶ್ ಬಾಬು ಮುಂದೆಯೇ ಇಳಯದಳಪತಿ ವಿಜಯ್ಗೆ ಅವಮಾನ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಇದಕ್ಕೆ ಸಂಬಂಧಿಸಿದ ಹಳೆಯ ವಿಡಿಯೋವೊಂದು ಇದೀಗ ವೈರಲ್ ಆಗುತ್ತಿದ್ದು, ವಿಜಯ್ ಅಭಿಮಾನಿಗಳ ಕೆಂಗಣ್ಣಿಗೆ ವಿಡಿಯೋ ಗುರಿಯಾಗಿದೆ.
ಈ ಹಿಂದೆ ನಟ ಮಹೇಶ್ ಬಾಬು ಅವರು ನಟಿ ಸಮಂತಾ ನಡೆಸಿಕೊಡುತ್ತಿದ್ದ ಶೋಗೆ ಗೆಸ್ಟ್ ಆಗಿ ಹೋಗಿದ್ದರು. ಈ ವೇಳೆ ನೀವು ಯಾವ ರೀತಿಯ ಸಿನಿಮಾಗಳನ್ನು ಇಷ್ಟಪಡುತ್ತೀರಾ ಎಂದು ಮಹೇಶ್ ಬಾಬು ಅವರನ್ನು ಸಮಂತಾ ಕೇಳಿದ್ದರು. ಇದಕ್ಕೆ ಉತ್ತರಿಸಿದ ಸಮಂತಾ, ವಿಜಯ್ ನಟನೆಯ ಕತ್ತಿ ಅಂತಹ ಸಿನಿಮಾಗಳನ್ನು ಇಷ್ಟಪಡುವುದಾಗಿ ಹೇಳಿದ್ದರು.
ಇದಾದ ಬಳಿಕ ನೀವು ಈ ಸಿನಿಮಾವನ್ನು ರಿಮೇಕ್ ಮಾಡಿ ನಟಿಸುತ್ತೀರಾ ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಮಹೇಶ್ ಬಾಬು, ಇಲ್ಲ ನಾನು ರಿಮೇಕ್ ಸಿನಿಮಾಗಳಲ್ಲಿ ನಟಿಸುವುದಿಲ್ಲ ಎಂದರು. ನಂತರ ನೀವು ವಿಜಯ್ ಅವರ ಚಿತ್ರಗಳ ರೀಮೇಕ್ಗಳಲ್ಲಿ ನಟಿಸುವುದಿಲ್ಲ. ಆದರೆ, ವಿಜಯ್ ಅವರು ನಿಮ್ಮ ಸಿನಿಮಾಗಳನ್ನು ರಿಮೇಕ್ ಮಾಡುತ್ತಾರೆ ಮತ್ತು ನಟಿಸುತ್ತಾರೆ ಎಂದು ಸಮಂತಾ ಹೇಳಿದರು.
ಇದೀಗ ವಿಡಿಯೋ ವೈರಲ್ ಆಗುತ್ತಿದ್ದು, ಸಮಂತಾ ಅವರು ನಟ ವಿಜಯ್ ಅವರನ್ನು ಅವಮಾನಿಸಿದ್ದಾರೆ ಎಂದು ಮಾತನಾಡಿಕೊಳ್ಳುತ್ತಿದ್ದಾರೆ. ಇನ್ನೊಂದೆಡೆ ಮಹೇಶ್ ಬಾಬು ಅಭಿಮಾನಿಗಳು ಇದು ಸತ್ಯ ಎಂದು ಹೇಳುತ್ತಿದ್ದಾರೆ. ಈ ಒಂದು ವಿಡಿಯೋ ಇದೀಗ ಸ್ಟಾರ್ ನಟರಿಬ್ಬರ ಅಭಿಮಾನಿಗಳ ವಾಗ್ವಾದಕ್ಕೆ ಕಾರಣವಾಗಿದೆ. (ಏಜೆನ್ಸೀಸ್)