

ಬೆಂಗಳೂರು: ಪುನೀತ್ ರಾಜಕುಮಾರ್ ಹುಟ್ಟುಹಬ್ಬಕ್ಕೆ ‘ಹಾಸ್ಟಲ್ ಹುಡುಗರು ಬೇಕಾಗಿದ್ದಾರೆ’ ಚಿತ್ರವನ್ನು ನಿರ್ಮಿಸುತ್ತಿರುವ ವರುಣ್, ‘ಅಪ್ಪು@46’ ಎಂಬ ಲಿರಿಕಲ್ ವಿಡಿಯೋ ಬಿಡುಗಡೆ ಮಾಡುತ್ತಿರುವ ವಿಷಯ ಗೊತ್ತೇ ಇದೆ. ಆ ಹಾಡನ್ನು ಇಂದು ಸಂಜೆ ಧ್ರುವ ಸರ್ಜಾ ಬಿಡುಗಡೆ ಮಾಡುತ್ತಿದ್ದಾರೆ.
ಇತ್ತೀಚೆಗಷ್ಟೇ ವರುಣ್ ಮತ್ತು ತಂಡದವರು ಧ್ರುವ ಸರ್ಜಾ ಅವರನ್ನು ಭೇಟಿ ಮಾಡಿ, 'ಅಪ್ಪು@46' ಲಿರಿಕಲ್ ವಿಡಿಯೋ ಬಿಡುಗಡೆ ಮಾಡುವುದಕ್ಕೆ ಒಪ್ಪಿಸಿ ಬಂದಿದ್ದಾರೆ. ಹಾಡು ಬಿಡುಗಡೆ ಮಾಡಲು ಗ್ರೀನ್ ಸಿಗ್ನಲ್ ಕೊಟ್ಟಿರುವ ಧ್ರುವ, ಇಂದು ಸಂಜೆ 5.30ಕ್ಕೆ ಯೂಟ್ಯೂಬ್‌ನ ವರುಣ್ ಸ್ಟುಡಿಯೋಸ್ ಚಾನಲ್‌ನಲ್ಲಿ ಅಧಿಕೃತವಾಗಿ ಬಿಡುಗಡೆ ಮಾಡಲಿದ್ದಾರೆ.
ವರುಣ್ ಕಳೆದ ವರ್ಷ ಶಿವರಾಜಕುಮಾರ್ ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ ‘ಶಿವ@58’ ಎಂಬ ಲಿರಿಕಲ್ ವಿಡಿಯೋ ಮಾಡಿ, ಯೂಟ್ಯೂಬ್‌ನ ತಮ್ಮ ವರುಣ್ ಪ್ರೊಡಕ್ಷನ್ಸ್ ಚಾನಲ್‌ನಲ್ಲಿ ಬಿಡುಗಡೆ ಮಾಡಿದ್ದರು. ಈಗ ಪುನೀತ್ ಮೇಲೆ ಪ್ರೀತಿಗೆ, ಗೌರವಕ್ಕೆ ಮತ್ತು ಅಭಿಮಾನಕ್ಕೆ ಅವರು ‘ಅಪ್ಪು 46’ ವಿಡಿಯೋ ಬಿಡುಗಡೆ ಮಾಡುತ್ತಿದ್ದಾರಂತೆ.
ಇದನ್ನೂ ಓದಿ: ಸೀತೆಯಾದ ಆಲಿಯಾ; RRR ಚಿತ್ರದ ಫಸ್ಟ್ಲುಕ್ ಬಿಡುಗಡೆ
‘ಅಪ್ಪು ಅಪ್ಪು ಅಪ್ಪು ...’ ಎಂದು ಪ್ರಾರಂಭವಾಗಿರುವ ಈ ಹಾಡನ್ನು ಅನಿರುದ್ಧ ಶಾಸ್ತ್ರಿ ಹಾಡಿದ್ದಾರೆ. ಈ ಹಾಡಿಗೆ ‘ಭಜರಂಗಿ’ ಮೋಹನ್ ಸಾಹಿತ್ಯ ಬರೆದರೆ, ಗುಮ್ಮಿನೇನಿ ವಿಜಯ್ ಸಂಗೀತ ಸಂಯೋಜಿಸಿದ್ದಾರೆ. ಪುನೀತ್ ಅವರ ಫೋಟೋ ಮತ್ತು ವಿಡೀಯೋಗಳನ್ನಿಟ್ಟುಕೊಂಡು ಈ ವಿಡಿಯೋ ಮಾಡಲಾಗಿದೆ ಎನ್ನುತ್ತಾರೆ ವರುಣ್.