

ಚೆನ್ನೈ: ಕಾಲಿವುಡ್ ಸ್ಟಾರ್ ನಟ ಧನುಷ್ ಇದೀಗ ಚೊಚ್ಚಲ ಓಟಿಟಿ ವೇದಿಕೆಗೆ ಪದಾರ್ಪಣೆ ಮಾಡಲು ಸಿದ್ಧತೆಯಲ್ಲಿದ್ದಾರೆ. ತುಂಬ ಸದ್ದು ಮಾಡಿರುವ ಜಗಮೇ ತಂಧಿರಮ್ ಚಿತ್ರ ಇದೀಗ ನೆಟ್ಫ್ಲಿಕ್ಸ್ನಲ್ಲಿ ಸ್ಟ್ರೀಮ್ ಆಗಲಿದೆ. ಜೂನ್ 18ಕ್ಕೆ ಅಂದರೆ ನಾಳೆ ಚಿತ್ರ ಬಿಡುಗಡೆ ಆಗಲಿದೆ. ಅಷ್ಟೇ ಅಲ್ಲ ಭಾರತದ ಇನ್ಯಾವುದೇ ಸಿನಿಮಾ ಮಾಡದ ಹೊಸ ದಾಖಲೆಯನ್ನು ಈ ಚಿತ್ರ ಮಾಡಿದೆ ಎಂದರೆ ನಂಬಲೇಬೇಕು.
17 ಭಾಷೆಗಳಲ್ಲಿ, 190 ದೇಶಗಳಲ್ಲಿ ಜಗಮೇ ತಂಧಿರಮ್ ಸಿನಿಮಾ ಪ್ರಸಾರವಾಗಲಿದೆ. ಇಲ್ಲಿಯವರೆಗೂ ಒಟಿಟಿಯಲ್ಲಿ ಕಾಲಿವುಡ್ನ ಬೇರಾವ ನಟನಿಗೂ ಈ ಮಟ್ಟದ ಪ್ರತಿಕ್ರಿಯೆ ಸಿಕ್ಕಿರಲಿಲ್ಲ. ಇದೇ ಮೊದಲ ಬಾರಿಗೆ ಧನುಷ್ ಸಿನಿಮಾವೊಂದು ಈ ಮಟ್ಟದ ಹೈಪ್ ಗಿಟ್ಟಿಸಿಕೊಂಡಿದೆ.
ಕಾರ್ತಿಕ್ ಸುಬ್ಬರಾಜು ನಿರ್ದೇಶನದ ಈ ಸಿನಿಮಾ ಎಲ್ಲ ಅಂದುಕೊಂಡಂತೆ ಆಗಿದ್ದರೆ, ಈಗಾಗಲೇ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿರಬೇಕಿತ್ತು. ಕರೊನಾ ಲಾಕ್ಡೌನ್ ಹಿನ್ನೆಲೆಯಲ್ಲಿ ಎರಡೆರಡು ಬಾರಿ ಬಿಡುಗಡೆ ದಿನಾಂಕವನ್ನು ಮುಂದೂಡಲಾಗಿತ್ತು.
ಚೆನ್ನೈ ಮೂಲದ ವೈನಾಟ್ ಸ್ಟುಡಿಯೋಸ್ ಮತ್ತು ರಿಲಯನ್ಸ್ ಎಂಟರ್ಟೈನ್ಮೆಂಟ್ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದು, ಜೂ. 1ಕ್ಕೆ ಚಿತ್ರದ ಟ್ರೇಲರ್ ಬಿಡುಗಡೆ ಆಗಿ ಮೆಚ್ಚುಗೆ ಗಳಿಸಿತ್ತು. ಜಗಮೇ ತಂಧಿರಮ್ ಸಿನಿಮಾ ಗ್ಯಾಂಗ್ಸ್ಟರ್ ವೊಬ್ಬನ ಹಿನ್ನೆಲೆಯ ಕಥಾನಕ. ಚಿತ್ರದಲ್ಲಿ ಗ್ಯಾಂಗ್ಸ್ಟರ್ ಆಗಿ ಧನುಷ್ ಕಾಣಿಸಿಕೊಂಡಿದ್ದು, ಐಶ್ವರ್ಯಾ ಲಕ್ಷ್ಮೀ, ಜೊಜಿ ಜಾರ್ಜ್, ಕಲೈಅರಸನ್ ಶರತ್ ರವಿ, ಜೇಮ್ಸ್ ಕೊಸ್ಮೋ ಪಾತ್ರವರ್ಗದಲ್ಲಿದ್ದಾರೆ.