

ಬೆಂಗಳೂರು: ‘ಥಗ್ಸ್ ಆಫ್ ರಾಮಘಡ’ ಎಂಬ ಹೊಸಬರ ಹೊಸ ಸಿನಿಮಾ ಜನವರಿ 6ಕ್ಕೆ ಬಿಡುಗಡೆಯಾಗುವುದಕ್ಕೆ ಸಜ್ಜಾಗಿದೆ. ಈ ಮಧ್ಯೆ, ಭಾನುವಾರ ಸಂಜೆ ಚಿತ್ರದ ಟ್ರೈಲರ್ ಬಿಡುಗಡೆಯಾಗಲಿದ್ದು, 'ಡಾಲಿ' ಧನಂಜಯ್ ಚಿತ್ರತಂಡಕ್ಕೆ ಸಾಥ್ ನೀಡಿದ್ದಾರೆ.
ಈ ಮಧ್ಯೆ, ‘ಥಗ್ಸ್ ಆಫ್ ರಾಮಘಡ’ ಚಿತ್ರತಂಡದವರು ವಿಭಿನ್ನ ರೀತಿಯ ಪ್ರಚಾರ ಮಾಡುವುದಕ್ಕೆ ಮುಂದಾಗಿದ್ದಾರೆ. ಕನ್ನಡದ ಜನಪ್ರಿಯ ಟ್ಯಾಬ್ಲಾಯ್ಡ್ಗಳನ್ನು ಹೋಲುವ ಪತ್ರಿಕೆಗಳನ್ನು ಡಿಸೈನ್ ಮಾಡಿಸಿ, ಅದರ ಮೂಲಕ ಚಿತ್ರದ ಕೆಲವು ಪ್ರಮುಖ ಪಾತ್ರಗಳನ್ನು ಪರಿಚಯಿಸುವ ಕೆಲಸ ಮಾಡಲಾಗುತ್ತಿದೆ. ಈ ಪೋಸ್ಟರ್ಗಳು ಸೋಷಿಯಲ್ ಮೀಡಿಯಾದಲ್ಲಿ ಪ್ರೇಕ್ಷಕರ ಗಮನ ಸೆಳೆಯುತ್ತಿದೆ.
ಕಾರ್ತಿಕ್ ಮಾರಲಭಾವಿ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಮೊದಲ ಚಿತ್ರ ‘ಥಗ್ಸ್ ಆಫ್ ರಾಮಘಡ’. ಉತ್ತರ ಕರ್ನಾಟಕ ಭಾಗದಲ್ಲಿ 1995ರಲ್ಲಿ ನಡೆದ ಸತ್ಯ ಘಟನೆ ಆಧರಿಸಿದ ಸಿನಿಮಾವಿದು. ಅದಕ್ಕೆ ಒಂದಿಷ್ಟು ಸಿನಿಮೀಯ ಸ್ಪರ್ಶ ಕೊಟ್ಟು, ಕ್ರೈಂ ಥ್ರಿಲ್ಲರ್ ಮಾಡಿದ್ದಾರೆ ಕಾರ್ತಿಕ್. ಉತ್ತರ ಕರ್ನಾಟಕದ ಚಿಕ್ಕ ಹಳ್ಳಿಯಲ್ಲಿ ನಡೆಯುವ ಕಥೆ ಇದಾಗಿದ್ದು, ನೈಜತೆಗೆ ಹತ್ತಿರವಾಗಿರಲೆಂದು ಪೂರ್ತಿ ಸಿನಿಮಾವನ್ನು ಉತ್ತರ ಕರ್ನಾಟಕ ಭಾಗದಲ್ಲೇ ಸೆರೆ ಹಿಡಿಯಲಾಗಿದೆ.
‘ಥಗ್ಸ್ ಆಫ್ ರಾಮಘಡ’ ಚಿತ್ರದಲ್ಲಿ ಚಂದನ್ ರಾಜ್, ಅಶ್ವಿನ್ ಹಾಸನ್, ಮಹಾಲಕ್ಷ್ಮೀ, ಸೂರ್ಯ ಕಿರಣ್, ಪ್ರಭು ಹೊಸದುರ್ಗ, ಟೈಗರ್ ಗಂಗ, ಜಗದೀಶ್, ಸೂರ್ಯಕಿರಣ್ ಮುಂತಾದವರು ನಟಿಸಿದ್ದು, ಭಾರತ್ ಟಾಕೀಸ್ ನಡಿ ಜಯಕುಮಾರ್ ಮತ್ತು ಕೀರ್ತಿರಾಜ್ ನಿರ್ಮಾಣ ಮಾಡಿದ್ದಾರೆ. ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು, ವಿವೇಕ್ ಚಕ್ರವರ್ತಿ ಸಂಗೀತ ಸಂಯೋಜಿಸಿದ್ದಾರೆ.