ಎನ್​ಸಿಬಿಯಿಂದ ಸಮನ್ಸ್​: ಮುಂಬೈಗೆ ವಾಪಸ್ಸಾದ ದೀಪಿಕಾ, ಸಾರಾ ...

Deepika - Sara - Final
Published on

ಮುಂಬೈ: ಬಾಲಿವುಡ್​ ಕಲಾವಿದರಿಗೆ ಡ್ರಗ್ಸ್​ ನಂಟಿರುವ ಕುರಿತು ದೀಪಿಕಾ ಪಡುಕೋಣೆ, ಸಾರಾ ಅಲಿ ಖಾನ್​, ಶ್ರದ್ಧಾ ಕಪೂರ್​ ಮತ್ತು ರಾಕುಲ್​ ಪ್ರೀತ್​ ಸಿಂಗ್​ಗೆ ವಿಚಾರಣೆಗೆ ಹಾಜರಾಗುವಂತೆ ಈಗಾಗಲೇ ನಾರ್ಕೋಟಿಕ್ಸ್​ ಕಂಟ್ರೋಲ್​ ಬ್ಯೂರೋ ಅಧಿಕಾರಿಗಳು ಸಮನ್ಸ್​ ನೀಡಿದ್ದು ಗೊತ್ತೇ ಇದೆ. ಈಗ ವಿಚಾರಣೆಗೆ ಹಾಜರಾಗುವುದಕ್ಕೆ ದೀಪಿಕಾ ಮತ್ತು ಸಾರಾ ಇಬ್ಬರೂ ಗೋವಾದಿಂದ ಮುಂಬೈಗೆ ವಾಪಸ್ಸಾಗಿದ್ದಾರೆ.

ಡ್ರಗ್ಸ್​ ಕೇಸ್​ನಲ್ಲಿ ಶುಕ್ರವಾರ ವಿಚಾರಣೆಗೆ ಹಾಜರಾಗಬೇಕು ಎಂದು ದೀಪಿಕಾ ಪಡುಕೋಣೆಗೆ ಎನ್​ಸಿಬಿ ನೋಟೀಸ್​ ಕೊಟ್ಟಿದೆ. ಗೋವಾದಲ್ಲಿ ಶೂಟಿಂಗ್​ನಲ್ಲಿ ಬಿಜಿಯಾಗಿದ್ದ ದೀಪಿಕಾ ಪಡುಕೋಣೆ, ವಿಚಾರಣೆಗೆ ಹಾಜರಾಗುವುದಕ್ಕೆಂದೇ ಇಂದು ಮುಂಬೈಗೆ ವಾಪಸ್ಸಾಗಿದ್ದಾರೆ. ದೀಪಿಕಾ ಅಲ್ಲದೆ, ನಟಿ ರಾಕುಲ್​ ಪ್ರೀತ್​ ಸಿಂಗ್​ ಸಹ ನಾಳೆ ವಿಚಾರಣೆಗೆ ಹಾಜರಾಗಬೇಕಿದೆ.

ರಾಕುಲ್​ ಇಂದೇ ವಿಚಾರಣೆಗೆ ಹಾಜರಾಗಬೇಕಿತ್ತು. ಆದರೆ, ಕಾರಣಾಂತರಗಳಿಂದ ವಿಚಾರಣೆಗೆ ಹಾಜರಾಗದೇ ಇದ್ದುದ್ದಕ್ಕೆ ಅವರು ನಾಳೆ ಹಾಜರಾಗಬೇಕಿದೆ. ದೀಪಿಕಾ ಮತ್ತು ರಾಕುಲ್​ ಅವರನ್ನು ಶುಕ್ರವಾರ ವಿಚಾರಣೆ ಒಳಪಡಿಸಲಿರುವ ಎನ್​ಸಿಬಿ ಅಧಿಕಾರಿಗಳು, ಶನಿವಾರ ಶ್ರದ್ಧಾ ಕಪೂರ್​ ಮತ್ತು ಸಾರಾ ಅಲಿ ಖಾನ್​ ಅವರನ್ನು ವಿಚಾರಣೆ ಮಾಡಲಿದ್ದಾರೆ.

ಇನ್ನು ಸಾರಾ ಅಲಿ ಖಾನ್​ ಸಹ ಗೋವಾದಲ್ಲಿದ್ದರು. ಕಳೆದ ಕೆಲವು ದಿನಗಳಿಂದ ಅಲ್ಲಿ ತಮ್ಮ ತಾಯಿ ಮತ್ತು ಸಹೋದರನ ಜತೆಗೆ ಬೀಡು ಬಿಟ್ಟಿರುವ ಸಾರಾ, ಇಂದು ತಮ್ಮ ತಾಯಿಯೊಂದಿಗೆ ಮುಂಬೈಗೆ ವಾಪಸ್ಸಾಗಿದ್ದಾರೆ.

ಇದಕ್ಕೂ ಮುನ್ನ ನಟಿ ರಿಯಾ ಚಕ್ರವರ್ತಿ ಅವರನ್ನು ಸುಶಾಂತ್​ ಸಿಂಗ್​ ಕೇಸ್​ನಲ್ಲಿ ವಿಚಾರಣೆಗೊಳಪಡಿಸಿದಾಗ, ತಾವು ಡ್ರಗ್ಸ್​ ತೆಗೆದುಕೊಳ್ಳುತ್ತಿದ್ದುದಾಗಿ ಒಪ್ಪಿಕೊಂಡಿದ್ದರು. ಬರೀ ತಾವಷ್ಟೇ ಅಲ್ಲ, ಸಾರಾ ಅಲಿ ಖಾನ್​ ಮತ್ತು ರಾಕುಲ್​ ಪ್ರೀತ್​ ಸಿಂಗ್​ ಸಹ ಡ್ರಗ್ಸ್​ ತೆಗೆದುಕೊಳ್ಳುತ್ತಾರೆ ಎಂದು ಹೇಳಿದ್ದರು. ಇನ್ನು ಈ ವಿಷಯದಲ್ಲಿ ಬೆನ್ನತ್ತಿದ ಎನ್​ಸಿಬಿ ಅಧಿಕಾರಿಗಳಿಗೆ ಈ ಪ್ರಕರಣದಲ್ಲಿ ದೀಪಿಕಾ ಮತ್ತು ಶ್ರದ್ಧಾ ಕಪೂರ್​ ಅವರ ಹೆಸರುಗಳು ಸಹ ಕೇಳಿಬಂದಿತ್ತು. ಅದೇ ಕಾರಣಕ್ಕೆ ಈ ನಾಲ್ವರು ನಟಿಯರನ್ನು ಎನ್​ಸಿಬಿ ಅಧಿಕಾರಿಗಳು ವಿಚಾರಣೆಗೆಂದು ಕರೆಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net