

ಬೆಂಗಳೂರು: ಕಳೆದ ವರ್ಷದ ಕೊನೆಯಲ್ಲಿ ‘ಆ ಕರಾಳ ರಾತ್ರಿ’ ಚಿತ್ರವನ್ನು ತೆಲುಗಿನಲ್ಲಿ ‘ಅನಗನಗಾ ಓ ಅತಿಥಿ’ ಎಂಬ ಹೆಸರಿನಲ್ಲಿ ರಿಮೇಕ್ ಮಾಡಿ ಬಿಡುಗಡೆ ಮಾಡಿದ್ದರು ದಯಾಳ್. ಆ ನಂತರ ಅವರ ಕಡೆಯಿಂದ ಯಾವುದೇ ಸುದ್ದಿ ಇರಲಿಲ್ಲ. ಈಗ ದಯಾಳ್ ಇನ್ನೊಂದು ತೆಲುಗು ಚಿತ್ರದ ನಿರ್ದೇಶನಕ್ಕೆ ಕೈ ಹಾಕಿದ್ದು, ಆಗಸ್ಟ್ ಮಧ್ಯ ಭಾಗದಿಂದ ಚಿತ್ರೀಕರಣ ಪ್ರಾರಂಭವಾಗಲಿದೆ. ಅಂದಹಾಗೆ, ದಯಾಳ್ ನಿರ್ದೇಶನದ ಹೊಸ ಚಿತ್ರವನ್ನು ನಿರ್ವಿುಸುತ್ತಿರುವವರು, ತೆಲುಗಿನ ಜನಪ್ರಿಯ ನಟ ಮೋಹನ್ ಬಾಬು.
ಇದೊಂದು ಆಕ್ಷನ್ ಥ್ರಿಲ್ಲರ್ ಚಿತ್ರವಾಗಿದ್ದು, ಸದ್ಯಕ್ಕೆ ‘ಮಾರುತಿ ನಗರ್ ಪೊಲೀಸ್ ಸ್ಟೇಷನ್’ ಎಂಬ ಶೀರ್ಷಿಕೆಯನ್ನು ಇಡಲಾಗಿದೆ. ಈ ಕುರಿತು ‘ವಿಜಯವಾಣಿ’ ಜತೆಗೆ ಮಾತನಾಡಿದ ಅವರು, ‘‘ಅನಗನಗಾ ಓ ಅತಿಥಿ’ ಚಿತ್ರವನ್ನು ನೋಡಿ ನನ್ನನ್ನು ಕರೆಸಿಕೊಂಡಿದ್ದರು. ಒಳ್ಳೆಯ ಕಥೆ ಇದ್ದರೆ ಹೇಳಿ, ಚಿತ್ರ ಮಾಡುವಾ ಎಂದರು. ನಾಲ್ಕೈದು ಕಥೆಗಳನ್ನು ಹೇಳಿದೆ. ಅದರಲ್ಲಿ ಈ ಕಥೆ ಅವರಿಗೆ ಬಹಳ ಇಷ್ಟವಾಗಿ, ನಿರ್ಮಾಣ ಮಾಡುವುದಕ್ಕೆ ಒಪ್ಪಿಕೊಂಡಿದ್ದಾರೆ. ಕಲಾವಿದರ ಆಯ್ಕೆ ಇನ್ನಷ್ಟೇ ಆಗಬೇಕಿದೆ. ಮಿಕ್ಕಂತೆ, ಶೇಖರ್ ಚಂದ್ರು ಛಾಯಾಗ್ರಹಣ ಮಾಡಿದರೆ, ಕ್ರೇಜಿ ಮೈಂಡ್ಸ್ ಶ್ರೀ ಸಂಕಲನ ಮಾಡಲಿದ್ದಾರೆ’ ಎಂದು ಮಾಹಿತಿ ಕೊಡುತ್ತಾರೆ ದಯಾಳ್.