

ಬೆಂಗಳೂರು: ಕೆಲವು ತಿಂಗಳುಗಳ ಹಿಂದೆ ಸಾಯಿಪಲ್ಲವಿ ಅಭಿನಯದ 'ಗಾರ್ಗಿ' ಚಿತ್ರದ ಟೀಸರ್ ಬಿಡುಗಡೆ ಮಾಡಿದ್ದರು ರಕ್ಷಿತ್ ಶೆಟ್ಟಿ. ಆ ನಂತರ 'ಪೊನ್ನಿಯನ್ ಸೆಲ್ವನ್' ಕನ್ನಡ ಅವತರಣಿಕೆಯ ಟ್ರೇಲರ್ ರಿಲೀಸ್ ಮಾಡಿದ್ದೂ ಅವರೇ. ಈಗ ರಕ್ಷಿತ್ ಇನ್ನೊಂದು ಪರಭಾಷಾ ಚಿತ್ರದ ಕನ್ನಡ ಅವತರಣಿಕೆಯ ಟೀಸರ್ ಬಿಡುಗಡೆ ಮಾಡಿದ್ದಾರೆ. ಅದೇ 'ದಸರಾ'.
'ನ್ಯಾಚುರಲ್ ಸ್ಟಾರ್' ನಾನಿ ಮೊದಲ ಬಾರಿಗೆ ಮಾಸ್ ಲುಕ್ನಲ್ಲಿ ಕಾಣಿಸಿಕೊಂಡಿರುವ 'ದಸರಾ', ಪ್ಯಾನ್ ಇಂಡಿಯಾ ಸಿನಿಮಾ ಆಗಿ ಐದು ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ. ಅದಕ್ಕೂ ಮೊದಲು ಈ ಚಿತ್ರದ ಟೀಸರ್ ಐದು ಭಾಷೆಗಳಲ್ಲಿ ಬಿಡುಗಡೆಯಾಗಿದೆ.
ತೆಲುಗು ಅವತರಣಿಕೆಯ ಟೀಸರ್ನ್ನು ಸ್ಟಾರ್ ನಿರ್ದೇಶಕ ಎಸ್.ಎಸ್. ರಾಜಮೌಳಿ ಬಿಡುಗಡೆ ಮಾಡಿದರೆ, ಕನ್ನಡದ್ದನ್ನು ರಕ್ಷಿತ್ ಅನಾವರಣಗೊಳಿಸಿದ್ದಾರೆ. ಇನ್ನು, ಶಾಹೀದ್ ಕಪೂರ್, ಧನುಷ್ ಮತ್ತು ದುಲ್ಕರ್ ಸಲ್ಮಾನ್, ಹಿಂದಿ, ತಮಿಳು ಮತ್ತು ಮಲಯಾಳಂ ಟೀಸರ್ಗಳನ್ನು ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.
ದುಷ್ಟರ ಮೇಲೆ ಒಳ್ಳೆಯದರ ವಿಜಯವನ್ನು ಸೂಚಿಸುವ ದಸರಾ ಹಬ್ಬವನ್ನು ಭಾರತದಾದ್ಯಂತ ಸಂತೋಷ ಮತ್ತು ಉತ್ಸಾಹದಿಂದ ಆಚರಿಸಲಾಗುತ್ತದೆ. ಈ ಆಚರಣೆಗಳಲ್ಲಿ ರಾವಣನ ಪ್ರತಿಕೃತಿಗಳನ್ನು ಸುಡಲಾಗುತ್ತದೆ. ಅದರಂತೆ ‘ದಸರಾ’ ಚಿತ್ರವೂ ಕೆಟ್ಟದರ ಮೇಲೆ ಒಳ್ಳೆಯದರ ವಿಜಯವನ್ನು ಸೂಚಿಸುತ್ತದೆ ಎಂಬುದಕ್ಕೆ ಟೀಸರ್ ತುಣುಕು ಸಾಕ್ಷಿಯಾಗಿದೆ.
ಶ್ರೀಕಾಂತ್ ಒಡೆಲಾ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಈ ಚಿತ್ರದಲ್ಲಿ ನಾನಿಗೆ ನಾಯಕಿಯಾಗಿ ಕೀರ್ತಿ ಸುರೇಶ್ ಇದ್ದಾರೆ. ಕನ್ನಡದ ದೀಕ್ಷಿತ್ ಶೆಟ್ಟಿ, ದೀಕ್ಷಿತ್ ಶೆಟ್ಟಿ, ಸಮುದ್ರಕನಿ, ಸಾಯಿಕುಮಾರ್, ಜರೀನಾ ವಹಾಬ್ ಸೇರಿದಂತೆ ಹಲವು ಕಲಾವಿದರು ಈ ಚಿತ್ರದಲ್ಲಿ ನಟಿಸಿದ್ದಾರೆ. ಸುಧಾಕರ್ ಚೆರುಕುರಿ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಸಂತೋಷ್ ನಾರಾಯಣ್ ಸಂಗೀತ ಸಂಯೋಜಿಸುತ್ತಿದ್ದಾರೆ.